ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುದುರಿ ಏರಿ ಹೊರಟ ಕೇರಳ ಹುಡುಗಿ

ಆಕೆ ನನ್ನ ಹೀರೊ– ಆನಂದ್‌ ಮಹೀಂದ್ರಾ

ಏಜೆನ್ಸೀಸ್
Published 9 ಏಪ್ರಿಲ್ 2019, 15:30 IST
Last Updated 9 ಏಪ್ರಿಲ್ 2019, 15:30 IST
   

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ದಿನ ನೀವು ಶಾಲೆಗೆ ಹೇಗೆ ಹೋಗಿದ್ದಿರಿ? ಪುಸ್ತಕ ತೆರೆದು ರಸ್ತೆಯುದ್ದಕ್ಕೂ ಪುಟಗಳನ್ನು ತಿರುವುತ್ತಲೇ ಪರೀಕ್ಷಾ ಕೊಠಡಿ ಪ್ರವೇಶಿಸಿದ್ದರೇ? ಆ ಪ್ರಶ್ನೆ, ಈ ಪ್ರಶ್ನೆಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚೆಸುತ್ತ ತಲೆ ಬಿಸಿ ಮಾಡಿಕೊಂಡಿದ್ದರೇ? ಅಥವಾ ಆಗಿದ್ದಾಗಲಿ, ದೇವ್ರ ಮೇಲೆ ಭಾರ ಅಂತ ಹಾಯಾಗಿ ಕೈಬೀಸಿ ತೆರಳಿದ್ದರೇ?– ಈ ಎಲ್ಲಕ್ಕಿಂತಲೂ ಭಿನ್ನವಾಗಿ ಕೇರಳದ ಹುಡುಗಿಯೊಬ್ಬಳು ಪರೀಕ್ಷೆ ಕೇಂದ್ರಕ್ಕೆ ಹೋಗಿರುವುದು ಪ್ರಸ್ತುತ ಅಂತರ್ಜಾಲದಲ್ಲಿ ಬಹು ಚರ್ಚಿತ ವಿಷಯ. 10ನೇ ತರಗತಿಯ ಹುಡುಗಿ ಕೃಷ್ಣಾ ಪರೀಕ್ಷೆಗೆ ಹೊರಟಿದ್ದು ಕುದುರೆ ಏರಿ...

ತ್ರಿಶೂರ್‌ ಜಿಲ್ಲೆಯ ಮಾಳಾದಲ್ಲಿ ವಿದ್ಯಾರ್ಥಿನಿ ಸಿಎ ಕೃಷ್ಣಾ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುದುರಿ ಸವಾರಿ ಮಾಡುತ್ತ ಸಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಇಲ್ಲಿನ ಹೋಲಿ ಗ್ರೇಸ್‌ ಅಕಾಡೆಮಿ ವಿದ್ಯಾರ್ಥಿನಿಯಾದ ಕೃಷ್ಣಾ, ಪರೀಕ್ಷೆಯ ಕೊನೆಯ ದಿನದಂದು ಕುದುರೆಯನ್ನೇರಿ ಹೊರಟಿದ್ದಳು.

‘ಪರೀಕ್ಷೆಯ ದಿನ ಕುದುರಿ ಸವಾರಿ ಮಾಡಿಕೊಂಡು ಹೋಗಬೇಕೆಂದು ಹಲವು ದಿನಗಳ ಹಿಂದೆಯೇ ಯೋಚಿಸಿದ್ದೆ. ಕೊನೆಯ ದಿನ ಸಮಾಜ ವಿಜ್ಞಾನ ಪತ್ರಿಕೆ ಪರೀಕ್ಷೆ ಇತ್ತು. ಅದೇ ದಿನ ಕುದುರೆ ಏರಿ ಹೊರಡಲು ನಾನು ನಿರ್ಧರಿಸಿದೆ’ ಎಂದು ಕೃಷ್ಣಾ ಹೇಳಿರುವುದಾಗಿ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.

ADVERTISEMENT

ಟ್ರಾಫಿಕ್‌ ಸೇರಿದಂತೆ ಹಲವು ಕಾರಣಗಳಿಂದಾಗಿಪರೀಕ್ಷೆಯ ದಿನವೇ ಕುದುರೆ ಸವಾರಿ ಮಾಡುವುದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಏಳನೇ ತರಗತಿಯಲ್ಲಿದ್ದಾಗಲೇ ಕುದುರೆ ಸವಾರಿ ಪ್ರಾರಂಭಿಸಿದ್ದ ಕೃಷ್ಣಾ, ಹಲವು ಸಂದರ್ಭಗಳಲ್ಲಿ ಕುದುರೆ ಸವಾರಿ ಮಾಡಿರುವ ಅನುಭವ ಹೊಂದಿದ್ದಾಳೆ. ಕಳೆದ ವರ್ಷ, ತನ್ನ 9ನೇ ತರಗತಿ ಪರೀಕ್ಷೆಯ ಸಮಯದಲ್ಲಿಯೂ ಕುದುರೆ ಏರಿ ಹೊರಟಿದ್ದಳು.

ಕೃಷ್ಣಾಳ ತಂದೆ ಅಜಯ್‌ ಕಳಿಂದಿ ಇಲ್ಲಿನ ವಿಷ್ಣು ದೇವಾಲಯದ ಅರ್ಚಕರಾಗಿದ್ದಾರೆ, ತಾಯಿ ಇಂದು ಮನೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಮಗಳಿಗಾಗಿಯೇ ಅಜಯ್‌ ಎರಡು ಕುದುರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಗಳ 11ನೇ ವರ್ಷದ ಹುಟ್ಟುಹಬ್ಬದಂದು ಮೊದಲ ಬಾರಿಗೆ ಕುದುರೆಯನ್ನು ಉಡುಗೊರೆಯಾಗಿ ನೀಡಿದ್ದರು ಹಾಗೂ 10ನೇ ತರಗತಿಯ ಪ್ರಾರಂಭದಲ್ಲಿ ಎರಡನೇ ಕುದುರೆ ತಂದುಕೊಟ್ಟಿದ್ದರು. ಮನೆಯಲ್ಲಿ ಕುದುರೆ ಸಾಕುವುದು ಮಗಳಿಗೆ ಅಚ್ಚುಮೆಚ್ಚು ಎನ್ನುತ್ತಾರೆ ಅಜಯ್‌.

ಮನೆಯಲ್ಲಿ ಈಗಾಗಲೇ ದನಕರುಗಳಿವೆ. ಕುದುರೆಗಳು, ಹಸು, ಗೂಳಿ ಹಾಗೂ ಮನೆಮಂದಿ ಸೇರಿ ಏಳು ಮಂದಿ ಇದ್ದೇವೆ. ಮತ್ತಷ್ಟು ಕುದುರೆಗಳನ್ನು ಸಾಕಲು ಸಾಧ್ಯವಾಗುವುದಿಲ್ಲ. ಕುದುರೆ ಹಾಗೂ ಗೂಳಿಗೆ ಆಹಾರ ಪೂರೈಸಲು ಅಧಿಕ ಖರ್ಚಾಗುತ್ತದೆ. ದೇವಾಲಯದ ಅರ್ಚಕನಾಗಿ ನನ್ನ ಗಳಿಕೆ ಪೂರ್ತಿ ಅವುಗಳ ಪಾಲನೆಗಾಗಿಯೇ ವ್ಯಯಿಸಬೇಕಾಗುತ್ತಿದೆ. ಮುಂದೆ, ಮಗಳಿಗೆ ಕುದುರೆ ಕೊಡಿಸಲು ಸಾಧ್ಯವಿಲ್ಲ ಎಂದು ಪರಿಸ್ಥಿತಿ ಹೇಳಿಕೊಂಡಿದ್ದಾರೆ.

ವಾಟ್ಸ್‌ಆ್ಯಪ್‌ ಮೂಲಕ ವಿಡಿಯೊ ತಲುಪಿದಾಗಲೇ ಕೃಷ್ಣಾಗೆ ತನ್ನ ಕುದುರೆ ಸವಾರಿ ವಿಡಿಯೊ ವೈರಲ್‌ ಆಗಿರುವುದು ತಿಳಿದಿದೆ. ಆಕೆ ಕುದರೆ ಸವಾರಿ ಮಾಡುವಾಗ, ಕುದುರೆ ಸವಾರಿ ತರಬೇತುದಾರರು ಬೈಕ್‌ನಲ್ಲಿ ಹಿಂಬಾಲಿಸಿ ವಿಡಿಯೊ ಮಾಡಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆನಂತರ ಹಲವು ಜನರು ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ಕೃಷ್ಣಾ ಹೇಳಿದ್ದಾರೆ.

ಆಕೆ ನನ್ನ ಹೀರೊ...

‘ಹುಡುಗಿಯರ ಶಿಕ್ಷಣ ಸವಾರಿ ಮುಂದೆ ಸಾಗಿದೆ...ಇದು ಜಾಗತಿಕವಾಗಿ ವೈರಲ್‌ ಆಗುವಂಥ ವಿಡಿಯೊ.’ ಎಂದು ಉದ್ಯಮಿ ಆನಂದ್‌ ಮಹೀಂದ್ರಾ ಟ್ವೀಟಿಸಿದ್ದಾರೆ. ಇನ್ಕ್ರೆಡಿಬಲ್‌ಇಂಡಿಯಾ ಹ್ಯಾಷ್‌ಟ್ಯಾಗ್‌ನೊಂದಿಗೆ ಕೃಷ್ಣಾಳ ಕುದುರೆ ಸವಾರಿ ವಿಡಿಯೊ ಹಂಚಿಕೊಂಡಿದ್ದಾರೆ.

‘ತ್ರಿಶೂರ್‌ನಲ್ಲಿ ಯಾರಿಗಾದರೂ ಈ ಹುಡುಗಿಯ ಪರಿಚಯವಿದೆಯೇ? ನನ್ನಲ್ಲಿ ಸ್ಕ್ರೀನ್‌ ಸೇವರ್‌ ಮಾಡಿಕೊಳ್ಳಲು ಆಕೆ ಮತ್ತು ಆಕೆಯ ಕುದುರೆಯ ಚಿತ್ರ ಬೇಕಾಗಿದೆ. ಆಕೆ ನನ್ನ ಹೀರೊ...ಶಾಲೆಯತ್ತ ತೆರಳುತ್ತಿರುವುದು ಭವಿಷ್ಯದ ಕುರಿತು ಭರವಸೆ ಮೂಡಿಸಿದೆ..’ ಎಂದು ಪ್ರಕಟಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.