ನವದೆಹಲಿ: ಪಾತಕಿ–ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದಿಂದ, ಬಿಜೆಪಿಯೇತರ ಪಕ್ಷದ ಆಡಳಿತವಿರುವ ಯಾವುದಾದರೂ ರಾಜ್ಯಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವೊಂದು ಬುಧವಾರ ನಿರಾಕರಿಸಿದೆ. ಮುಖ್ತಾರ್ ಈಗ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿ ಇದ್ದಾನೆ.
ಮುಖ್ತಾರ್ ಪರವಾಗಿ ಅವನ ಪುತ್ರ ಉಮರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿನ ಮನವಿಯ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಮನವಿಯನ್ನು ಬದಲಾಯಿಸುವಂತೆ ಪೀಠವು ಉಮರ್ ಪರ ವಕೀಲ ಕಪಿಲ್ ಸಿಬಲ್ ಅವರಿಗೆ ಸೂಚಿಸಿತು.
ಬಿಜೆಪಿ ಶಾಸಕ ಕೃಷ್ಣಾನಂದ್ ರಾಯ್ ಅವರ ಹತ್ಯೆ ಪ್ರಕರಣದಲ್ಲಿ ಮುಖ್ತಾರ್ ಆರೋಪಿ. ಈ ಪ್ರಕರಣದ ಇತರ ಎಲ್ಲ ಆರೋಪಿಗಳು ಬಿಡುಗಡೆ ಆಗಿದ್ದಾರೆ. ಬಿಡುಗಡೆ ಆಗಿರುವ ಎಂಟು ಜನರ ಪೈಕಿ ನಾಲ್ಕು ಮಂದಿಯ ಹತ್ಯೆ ಆಗಿದೆ. ಮುಖ್ತಾರ್ ಜೀವಕ್ಕೆ ಬೆದರಿಕೆ ಎದುರಾಗುವ ಆತಂಕ ಇದೆ ಎಂದು ಸಿಬಲ್ ಹೇಳಿದರು. ಆದರೆ ಮುಖ್ತಾರ್‌ಗೆ ಭದ್ರತೆ ಒದಗಿಸುವಂತೆ ಹೈಕೋರ್ಟ್ ಆದೇಶವೊಂದು ಈಗಾಗಲೇ ಇದೆ ಎಂದು ಪೀಠವು ಸಿಬಲ್ ಅವರಿಗೆ ನೆನಪಿಸಿತು.
‘ನಮ್ಮ ಪ್ರಧಾನಿಯವರಿಗೇ (ಇಂದಿರಾ ಗಾಂಧಿ) ರಕ್ಷಣೆ ನೀಡಲು ಆಗಲಿಲ್ಲ. ಅವರ ಭದ್ರತಾ ಸಿಬ್ಬಂದಿಯೇ ಅವರನ್ನು ಹತ್ಯೆ ಮಾಡಿದರು’ ಎಂದು ಪೀಠ ಹೇಳಿತು. ತಮ್ಮ ತಂದೆಯನ್ನು ಹತ್ಯೆ ಮಾಡಲು ಪಿತೂರಿ ನಡೆದಿದೆ, ತಂದೆಯ ಜೀವಕ್ಕೆ ಬೆದರಿಕೆ ಇದೆ ಎಂದು ಉಮರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.