ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನಾ ನಾಯಕರು ಹೊಸ ಚಿಹ್ನೆಯಾಗಿ 'ಉದಯ ಸೂರ್ಯ', 'ಗುರಾಣಿ ಮತ್ತು ಕತ್ತಿ' ಇಲ್ಲವೇ 'ಅರಳಿ ಮರ'ದ ಗುರುತು ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಶಿವಸೇನಾದ ಹೆಸರು ಅಥವಾ ಸದ್ಯ ಇರುವ ಚಿಹ್ನೆಯಾದ 'ಬಿಲ್ಲು–ಬಾಣ'ವನ್ನು ಉಪಯೋಗಿಸುವಂತಿಲ್ಲ ಎಂದು ಚುನಾವಣಾ ಆಯೋಗವು ಶಿಂದೆ ಹಾಗೂ ಉದ್ಧವ್ ಠಾಕ್ರೆ ಬಣಕ್ಕೆ ಶನಿವಾರ ಸೂಚಿಸಿತ್ತು.
ತ್ರಿಶೂಲದ ಚಿಹ್ನೆಯನ್ನು ಹಂಚಿಕೆ ಮಾಡುವಂತೆ ಠಾಕ್ರೆ ಬಣ ಮಾಡಿದ್ದ ಮನವಿಯನ್ನು ಸೋಮವಾರ ತಿರಸ್ಕರಿಸಿದ್ದ ಚುನಾವಣಾ ಆಯೋಗ, ಪಂಜಿನ ಚಿಹ್ನೆಯನ್ನು ಹಂಚಿಕೆ ಮಾಡಿತ್ತು. ಜೊತೆಗೆ,ಉದ್ಧವ್ ಬಣಕ್ಕೆ ‘ಶಿವಸೇನಾ–ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಹಾಗೂ ಶಿಂದೆ ಬಣಕ್ಕೆ ‘ಬಾಳಾಸಾಹೇಬಾಚಿ ಶಿವಸೇನಾ (ಬಾಳಾಸಾಹೇಬರ ಶಿವಸೇನಾ) ಎಂಬ ಹೆಸರುಗಳನ್ನೂ ಹಂಚಿಕೆ ಮಾಡಿತ್ತು.ಉಭಯ ಬಣಗಳು ಈ ಹೆಸರುಗಳ ಅಡಿಯಲ್ಲೇ ಮುಂಬರುವ ಉಪಚುನಾವಣೆಯನ್ನು ಎದುರಿಸಬೇಕಾಗುತ್ತದೆ.
ಹಾಗೆಯೇ,ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ತಮ್ಮ ಆಯ್ಕೆಯ ಮೂರು ಚಿಹ್ನೆಗಳನ್ನು ಆಯೋಗಕ್ಕೆ ಸಲ್ಲಿಸುವಂತೆ ಶಿಂದೆ ಬಣಕ್ಕೆ ಚುನಾವಣಾ ಆಯೋಗ ಸೂಚಿನೆ ನೀಡಿತ್ತು.
ಪಕ್ಷದ 55 ಶಾಸಕರ ಪೈಕಿ 40 ಮಂದಿ ಮತ್ತು 18 ಸಂಸದರಲ್ಲಿ 12 ಮಂದಿಯ ಬೆಂಬಲವಿದೆ ಎಂದು ಘೋಷಿಸಿದ್ದ ಶಿಂದೆ,ಠಾಕ್ರೆ ನಾಯಕತ್ವದ ವಿರುದ್ಧ ಜೂನ್ ತಿಂಗಳಲ್ಲಿ ಬಂಡಾಯ ಸಾರಿದ್ದರು.ನಂತರದ ಬೆಳವಣಿಗೆಯಲ್ಲಿ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಶಿಂದೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.