ADVERTISEMENT

ಐಎನ್‌ಎಸ್ ಬ್ರಹ್ಮಪುತ್ರದಲ್ಲಿ ಬೆಂಕಿ: ಹಾನಿಯ ಮೌಲ್ಯಮಾಪನ,ನಾವಿಕನ ಪತ್ತೆಗೆ ಕ್ರಮ

ಭಾರತೀಯ ನೌಕಾಪಡೆಯ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಹೇಳಿಕೆ

ಪಿಟಿಐ
Published 23 ಜುಲೈ 2024, 14:50 IST
Last Updated 23 ಜುಲೈ 2024, 14:50 IST
   

ಪಣಜಿ: 'ಬೆಂಕಿ ಕಾಣಿಸಿಕೊಂಡ ನಂತರ ಒಂದು ಬದಿಗೆ ವಾಲಿರುವ ಸ್ವದೇಶಿ ಯುದ್ಧನೌಕೆ ಐಎನ್‌ಎಸ್ ಬ್ರಹ್ಮಪುತ್ರವನ್ನು ಸುಸ್ಥಿತಿಗೆ ನಿಲ್ಲಿಸಿ, ನಂತರ ಹಾನಿಯ ಮೌಲ್ಯಮಾಪನ ನಡೆಸಲಾಗುವುದು‘ ಎಂದು ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥ ವೈಸ್ ಅಡ್ಮಿರಲ್‌ ಕೃಷ್ಣ ಸ್ವಾಮಿನಾಥನ್ ಮಂಗಳವಾರ ಹೇಳಿದ್ದಾರೆ. 

ಭಾನುವಾರ ಬೆಂಕಿ ಕಾಣಿಸಿಕೊಂಡ ನಂತರ ನಾಪತ್ತೆಯಾದ ನಾವಿಕ ಹಡಗಿನಿಂದ ಹೊರ ಹೋಗುತ್ತಿರುವುದು ಕಂಡುಬಂದಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

‘ಮುಂಬೈನ ನೌಕಾ ನೆಲೆಯಲ್ಲಿ ಪುನರ್‌ನಿರ್ಮಾಣ ಕೈಗೊಳ್ಳಲಾಗಿದ್ದ ಹಲವು ವಿಧದ ಕಾರ್ಯಾಚರಣೆಯ ಯುದ್ಧನೌಕೆಯಲ್ಲಿ ಜುಲೈ 21ರ ಸಂಜೆ ಬೆಂಕಿ ಕಾಣಿಸಿಕೊಂಡಿತು. ಬಂದರಿನ ಹಡಗುಕಟ್ಟೆ ಮತ್ತು ಇತರ ಹಡಗುಗಳ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಐಎನ್‌ಎಸ್‌ ಬ್ರಹ್ಮಪುತ್ರ ಹಡಗಿನ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಬೆಂಕಿ ನಿಯಂತ್ರಣಕ್ಕೆ ತಂದರು. ಆದರೆ, ಹಡಗು ಬಂದರಿನಲ್ಲಿ ಒಂದು ಬದಿಗೆ ತೀವ್ರ ವಾಲಿತು. ಎಲ್ಲ ಪ್ರಯತ್ನಗಳ ಹೊರತಾಗಿಯೂ ಅದನ್ನು ನೇರ ಸ್ಥಾನಕ್ಕೆ ತರಲು ಸಾಧ್ಯವಾಗಿಲ್ಲ’ ಎಂದು ನೌಕಾಪಡೆಯು ಪ್ರಕಟಣೆಯಲ್ಲಿ ಹೇಳಿದೆ.

ADVERTISEMENT

ದಕ್ಷಿಣ ಗೋವಾದ ವಾಸ್ಕೊದಲ್ಲಿ ಮಾತನಾಡಿದ ವೈಸ್ ಅಡ್ಮಿರಲ್ ಸ್ವಾಮಿನಾಥನ್, ‘ಇದೊಂದು ದುಃಖಕರ ಘಟನೆ. ನೌಕಾಪಡೆಯು ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲಿದೆ. ಈ ವಿಚಾರದಲ್ಲಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೊ ಅದೆಲ್ಲವನ್ನೂ ಖಂಡಿತವಾಗಿಯೂ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ಬೆಂಕಿ ನಂದಿಸಲು ಸಾಕಷ್ಟು ನೀರು ಬಳಸಲಾಗಿದೆ. ಬಹುಶಃ ಇದರಿಂದಾಗಿ ಹಡಗಿನ ಸ್ಥಿರತೆಗೆ ತೊಂದರೆಯಾಗಿ, ಅದು ಒಂದು ಬದಿಗೆ ವಾಲಿಕೊಂಡಿರಬಹುದು. ಹಡಗಿನಿಂದ ನೀರು ಹೊರಹಾಕಿದ ನಂತರ ಹಡಗನ್ನು ನೇರವಾಗಿ ನಿಲ್ಲಿಸಬಹುದು. ಆ ನಂತರ ಹಡಗಿಗೆ ಆಗಿರುವ ಹಾನಿಯನ್ನು ನಾವು ಮೌಲ್ಯಮಾಪನ ಮಾಡಬಹುದಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.