ಚಂಡೀಗಢ: ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ಶನಿವಾರ ರಾಜೀನಾಮೆ ನೀಡಿದ್ದಾರೆ.
ಅಕಲ್ ತಖ್ತ್, ಬಾದಲ್ ಅವರನ್ನು ‘ತಂಖೈಯ’ (ಧಾರ್ಮಿಕ ದುರಾಚಾರದ ತಪ್ಪಿತಸ್ಥ) ಎಂದು ಘೋಷಿಸಿರುವ ಕಾರಣ, ಪಕ್ಷದ ಕಾರ್ಯಕಾರಿ ಸಮಿತಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಎಸ್‌ಎಡಿಯ ಹಿರಿಯ ಮುಖಂಡ ದಲಜೀತ್ ಸಿಂಗ್ ಚೀಮಾ ‘ಎಕ್ಸ್’ನಲ್ಲಿ ಪ್ರಕಟಿಸಿದ್ದಾರೆ.
ಪಕ್ಷದ ನೂತನ ಅಧ್ಯಕ್ಷರ ಆಯ್ಕೆಯ ಚುನಾವಣೆಗೆ ಅನುವು ಮಾಡಿಕೊಡಲು ಸುಖಬೀರ್ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಎಸ್‌ಎಡಿ ನೇತೃತ್ವದ ಸರ್ಕಾರವು 2007ರಿಂದ 2017ರವರೆಗೆ ಮಾಡಿದ ‘ತಪ್ಪುಗಳಿಗಾಗಿ’, ಅಕಲ್ ತಖ್ತ್ ಜತ್ತೇದಾರ್ ಗಿಯಾನಿ ರಘಬೀರ್ ಸಿಂಗ್ ಅವರು ಸುಖಬೀರ್ ಸಿಂಗ್ ಬಾದಲ್ ಅವರನ್ನು ಕಳೆದ ಆ.30ರಂದು ‘ತಂಖೈಯ’ ಎಂದು ಘೋಷಿಸಿದರು.
ಅಕಲ್ ತಖ್ತ್‌ನ ಈ ಘೋಷಣೆಯಿಂದ ಪರಿಹಾರ ಪಡೆಯಲು ಬಾದಲ್ ವಿಫಲರಾಗಿದ್ದರಿಂದ, ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಸ್‌ಎಡಿ ಪ್ರಕಟಿಸಿತು.
ಮಾಜಿ ಸಂಸದ ಪ್ರೇಮ್ ಸಿಂಗ್ ಚಂದುಮಜ್ರಾ ಹಾಗೂ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಮಾಜಿ ಮುಖ್ಯಸ್ಥ ಬೀಬಿ ಜಾಗೀರ್ ಕೌರ್ ಸೇರಿದಂತೆ ಎಸ್‌ಎಡಿಯ ಬಂಡಾಯ ನಾಯಕರು ಜುಲೈ 1ರಂದು ಅಕಾಲ್ ತಖ್ತ್ ಮುಂದೆ ಹಾಜರಾಗಿ, ಎಸ್‌ಎಡಿ ಅಧಿಕಾರದ ಅವಧಿಯಲ್ಲಿ ನಡೆದ ‘ತಪ್ಪುಗಳಿಗಾಗಿ’ ಕ್ಷಮೆಯಾಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.