ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ ಸಂಸದೆ ನವನೀತ್ ಕೌರ್ ರಾಣಾ ಅವರು, ‘ಶಿವಸೇನಾವು ಅದರ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಹಿಂದುತ್ವದ ಹಾದಿಯನ್ನು ತ್ಯಜಿಸಿದ್ದು, ನಂ. 10 ಜನಪಥ್‌ನ (ಕಾಂಗ್ರೆಸ್ ಅಧ್ಯಕ್ಷರ ನಿವಾಸ) ನಿರ್ದೇಶನದದಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದ್ದಾರೆ.
ಮುಂಬೈನಲ್ಲಿ ಶನಿವಾರ ನಡೆದ ರ‍್ಯಾಲಿಯೊಂದರಲ್ಲಿ ಕೃಷಿ ಸಂಕಷ್ಟ ಮತ್ತು ನಿರುದ್ಯೋಗದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸದಿದ್ದಕ್ಕಾಗಿ ಠಾಕ್ರೆ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡ ರಾಣಾ ದಂಪತಿ, ‘ಹಿಂದೆ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವುದಾಗಿ ಶಿವಸೇನಾ ಘೋಷಿಸಿತ್ತು. ಆದರೆ, ಈಗ ಮುಖ್ಯಮಂತ್ರಿ ಅದರ ಅಗತ್ಯವಿಲ್ಲ ಎನ್ನುತ್ತಿದ್ದಾರೆ. ಮರು ನಾಮಕರಣ ಮಾಡಿದರೆ ಮೈತ್ರಿಕೂಟದ ಪಾಲುದಾರರು ತಮ್ಮ ಬೆಂಬಲ ವಾಪಸ್ ಪಡೆದು ಸರ್ಕಾರವನ್ನು ಬೀಳಿಸುತ್ತಾರೆ ಎಂಬ ಭಯ ಮುಖ್ಯಮಂತ್ರಿ ಅವರನ್ನು ಆವರಿಸಿದೆ’ ಎಂದು ದೂರಿದ್ದಾರೆ.
‘ಹನುಮಾನ್ ಚಾಲೀಸಾ ಪಠಿಸುವವರ ಮೇಲೆ ದೇಶದ್ರೋಹದ ಆರೋಪಗಳನ್ನು ಹೊರಿಸಲು ಠಾಕ್ರೆ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮೊಘಲ್ ದೊರೆ ಔರಂಗಜೇಬ್ ಸಮಾಧಿಗೆ ಭೇಟಿ ನೀಡಿ ಹೂವುಗಳನ್ನು ಅರ್ಪಿಸುವ ವ್ಯಕ್ತಿಗಳಿಗೆ
(ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಅವರನ್ನು ಉಲ್ಲೇಖಿಸಿ) ಮುಕ್ತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಶಿವಸೇನಾವು ಔರಂಗಜೇಬ್ ಸೇನಾ ಆಗಿಬಿಟ್ಟಿದೆಯೇ’ ಎಂದೂ ರಾಣಾ ದಂಪತಿ ಪ್ರಶ್ನಿಸಿದ್ದಾರೆ.
‘ಹನುಮಾನ್ ಚಾಲೀಸಾ ಪಠಿಸಿದ್ದಕ್ಕಾಗಿ ಸರ್ಕಾರ ನನ್ನನ್ನು ಜೈಲಿಗೆ ಕಳುಹಿಸಿತು. ಅಲ್ಲಿ ನನಗಾದ ಗಾಯಗಳು ಇನ್ನೂ ವಾಸಿಯಾಗಿಲ್ಲ. ನಾನಿನ್ನೂ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾವುದೇ ತಪ್ಪು ಮಾಡದೇ ಠಾಕ್ರೆ ಅವರ ಕುಟುಂಬದ ಮಹಿಳೆ ಜೈಲಿಗೆ ಹೋದಾಗ ಮಾತ್ರ ಆಕೆಯ ನೋವು ಏನೆಂದು ಉದ್ಧವ್ ಠಾಕ್ರೆ ಅವರಿಗೆ ಅರ್ಥವಾಗಲು ಸಾಧ್ಯ’ ಎಂದು ನವನೀತ್ ರಾಣಾ ಹೇಳಿದ್ದಾರೆ.
‘ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ರಶ್ಮಿ ಠಾಕ್ರೆ ಜೈಲುಪಾಲಾದಾಗ, ಆಗ ಅವರು ಅನುಭವಿಸುವ ನೋವು ಹೇಗಿರುತ್ತದೆ ನಾನು ಕೇಳುತ್ತೇನೆ’ ಎಂದೂ ಸಂಸದೆ ಆಕ್ರೋಶದಿಂದ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.