ADVERTISEMENT

ಹನುಮಾನ್ ಚಾಲೀಸಾ ಹೆಸರಲ್ಲಿ ದೇಶ ವಿಭಜಿಸುವವರ ವಿರುದ್ಧ ಶಿವಸೇನೆ ಹೋರಾಟ: ರಾವುತ್

ಪಿಟಿಐ
Published 30 ಏಪ್ರಿಲ್ 2022, 10:32 IST
Last Updated 30 ಏಪ್ರಿಲ್ 2022, 10:32 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಹನುಮಾನ್ ಚಾಲೀಸಾ ಹೆಸರಿನಲ್ಲಿ ಗಲಭೆಗಳನ್ನು ಉಂಟುಮಾಡುವ ಮೂಲಕ ದೇಶವನ್ನು ವಿಭಜಿಸಲು ಯೋಜಿಸುವವರ ವಿರುದ್ಧ ಶಿವಸೇನೆ ಹೋರಾಡುತ್ತಿದೆ. ಇಂತಹ ಪ್ರಯತ್ನಗಳನ್ನು ವಿರೋಧಿಸಿದ್ದಕ್ಕಾಗಿ ಪಕ್ಷದ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರು ಸಂತೋಷಪಡುತ್ತಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು, 'ಹನುಮಾನ್ ಚಾಲೀಸಾ ಪಠಿಸಿದ ಜನರನ್ನು ಬಂಧಿಸುವ' ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಕ್ರಮದ ಕುರಿತು ವಾಗ್ದಾಳಿ ನಡೆಸಿದ ಒಂದು ದಿನದ ನಂತರ ರಾವುತ್ ಈ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ, ಹನುಮಾನ್ ಚಾಲೀಸಾವನ್ನು ಪಠಿಸುವುದಕ್ಕಾಗಿ ಅಥವಾ ಭಗವಾನ್ ರಾಮನ ಹೆಸರನ್ನು ತೆಗೆದುಕೊಂಡಿದ್ದಕ್ಕಾಗಿ ಬಂಧಿಸಿರುವುದನ್ನು ನಾನು ಇಲ್ಲಿ ನೋಡಿದ್ದೇನೆ. ಇದರಿಂದಾಗಿ ಠಾಕ್ರೆ ಸಾಹೇಬ್ (ಶಿವಸೇನೆ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆ) ಅವರ ಆತ್ಮವು ಘಾಸಿಗೊಳ್ಳುತ್ತಿದೆ' ಎಂದು ಬಿಜೆಪಿ ನಾಯಕ ಚೌಬೆ ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ADVERTISEMENT

ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಹಾಗೂ ಶಾಸಕ ರವಿ ರಾಣಾ ಅವರು ಕಳೆದ ಶನಿವಾರ ಬಾಂದ್ರಾದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದರು. ಅದಾದ ಬಳಿಕ, ದಂಪತಿಯನ್ನು ಬಂಧಿಸಲಾಯಿತು ಮತ್ತು ದೇಶದ್ರೋಹ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

'ಅವರು(ಚೌಬೆ) ಬಾಳಾಸಾಹೇಬ್ ಠಾಕ್ರೆ ಬಗ್ಗೆ ಚಿಂತಿಸಬೇಕಾಗಿಲ್ಲ. ಹನುಮಾನ್ ಚಾಲೀಸಾದ ಹೆಸರಿನಲ್ಲಿ ಗಲಭೆಗಳನ್ನು ಉಂಟುಮಾಡುವ ಮೂಲಕ ಈ ದೇಶವನ್ನು ವಿಭಜಿಸಲು ಯೋಜಿಸುವವರ ವಿರುದ್ಧ ಶಿವಸೇನೆ ಹೋರಾಡುತ್ತಿದೆ. ನಮ್ಮ ಈ ಹೋರಾಟಕ್ಕೆ ಬಾಳಾಸಾಹೇಬ್ ಠಾಕ್ರೆ ನಮಗೆ ಪುಷ್ಪವೃಷ್ಟಿ ಮಾಡುತ್ತಾರೆ... ನಮ್ಮ ಈ ನಡೆಯನ್ನು ನೋಡಿ ಅವರಿಗೆ ಸಂತೋಷವಾಗಿದೆ' ಎಂದು ಸಚಿವರ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ ರಾವುತ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ ಹನುಮಾನ್ ದಲಿತ ಮತ್ತು ಅರಣ್ಯವಾಸಿ ಎಂದಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾವುತ್, 'ಇಂತಹ ಹೇಳಿಕೆಗಳನ್ನು ನೀಡುವ ಜನರು ನಮಗೆ ಹನುಮಾನ್ ಚಾಲೀಸಾ ಬಗ್ಗೆ ಹೇಳುತ್ತಿದ್ದಾರೆ. ಚೌಬೆ ಅವರು 'ಯೋಗಿ ಚಾಲೀಸಾ' ಓದಬೇಕು. ಹನುಮಾನ್ ಯಾರೆಂದು ನಮಗೆ ತಿಳಿದಿದೆ. ಮಹಾರಾಷ್ಟ್ರವು ಭಗವಾನ್ ರಾಮ ಮತ್ತು ಹನುಮಂತನನ್ನು ಆರಾಧಿಸುತ್ತದೆ. ನೀವು ಬಾಳಾಸಾಹೇಬ್ ಠಾಕ್ರೆ ಬಗ್ಗೆ ಚಿಂತಿಸಬೇಡಿ' ಎಂದು ಹೇಳಿದರು.

'ಬಿಜೆಪಿಯು ಶಿವಸೇನೆಗೆ ದ್ರೋಹ ಬಗೆದ ನಂತರ ಠಾಕ್ರೆ ಒಂದು ಹನಿ ಕಣ್ಣೀರು ಸುರಿಸಿರಬಹುದು' ಎಂದು ಹೇಳಿದರು.

'ನಾವು ಅಧಿಕಾರದಲ್ಲಿರುವಾಗಿನಿಂದ (ಮಹಾರಾಷ್ಟ್ರದಲ್ಲಿ) ಕೆಲವು ಸಂದರ್ಭಗಳಲ್ಲಿ ನಾವು ಪಿತೂರಿ ನಡೆಸುತ್ತಿರುವ ಕೆಲವು ಸಮಾಜ ವಿರೋಧಿ ಸಂಘಟನೆಗಳು ಮತ್ತು ಘಟಕಗಳ ಮೇಲೆ ನಿಗಾ ವಹಿಸಿದ್ದೇವೆ. ಆದರೆ, ನಮ್ಮ ತಲೆಯ ಮೇಲೆ ನೀರು ಹರಿಯಲು ಪ್ರಾರಂಭಿಸಿದರೆ (ಅಂತಹ ವಿಚಾರಗಳು ನಿಯಂತ್ರಣಕ್ಕೆ ಬರದಿದ್ದರೆ), ನಾವು ಇತರರನ್ನು ಆ ನೀರಿನಲ್ಲಿ ಮುಳುಗಿಸಬೇಕಾಗುತ್ತದೆ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.