ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಉಮರ್ ಖಾಲಿದ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ನವೀನ್ ದಲಾಲ್‌ಗೆ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಸೇನೆ ಟಿಕೆಟ್ ನೀಡಿದೆ.
ಅಕ್ಟೋಬರ್ 21ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನವೀನ್ ದಲಾಲ್ ಹರ್ಯಾಣದ ಬಹಾದ್ದೂರ್‌ಗಢ್ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.
ಸ್ವಯಂ ಘೋಷಿತ ಗೋರಕ್ಷಕರಾಗಿರುವ ದಲಾಲ್ ಆರು ತಿಂಗಳ ಹಿಂದೆ ಶಿವಸೇನೆಗೆ ಸೇರಿದ್ದರು. ರಾಷ್ಟ್ರೀಯತೆ, ಗೋರಕ್ಷಣೆ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮನ್ನಣೆ ಸಿಗುವುದಕ್ಕಾಗಿ ನಾವು ಒಂದೇ ರೀತಿಯ ಹೋರಾಟ ಮಾಡುತ್ತಿದ್ದೇವೆ. ಅದರೆ ನಮ್ಮ ವಿಚಾರಧಾರೆಗಳು ಹೊಂದುತ್ತವೆ. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ರೈತರಿಗೆ, ಹುತಾತ್ಮರಿಗೆ, ಹಸು ಮತ್ತು ಬಡವರಿಗಾಗಿ ಏನೂ ಮಾಡಿಲ್ಲ. ಅವರಿಗೆ ರಾಜಕೀಯದಲ್ಲಿ ಮಾತ್ರ ಆಸಕ್ತಿ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ದಲಾಲ್ ಹೇಳಿದ್ದಾರೆ.
ದಲಾಲ್ ಅವರಿಗೆ ಪಕ್ಷದ ಟಿಕೆಟ್ ನೀಡಿರುವ ಬಗ್ಗೆ ಮಾತನಾಡಿದಶಿವಸೇನೆ ಹರ್ಯಾಣ (ದಕ್ಷಿಣ) ಮುಖ್ಯಸ್ಥ ವಿಕ್ರಮ್ ಯಾದವ್,ಗೋರಕ್ಷಣೆಗಾಗಿ ಹೋರಾಡುವ ಮತ್ತು ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ದನಿಯೆತ್ತಿದ ವ್ಯಕ್ತಿ ದಲಾಲ್. ಹಾಗಾಗಿ ಅವರನ್ನು ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ.
2018 ಆಗಸ್ಟ್‌ನಲ್ಲಿ ನವೀನ್ ದಲಾಲ್ ಮತ್ತು ದರ್ವೇಶ್ ಶಾಹ್‌ಪುರ್ ನವದೆಹಲಿಯ ಕಾನ್ಟಿಟ್ಯೂಷನ್ ಕ್ಲಬ್ ಹೊರಗಡೆ ಖಾಲೀದ್ ಮೇಲೆ ಗುಂಡು ಹಾರಿಸಿದ್ದರು. ಖಾಲಿದ್ ಅವರು ಈ ದಾಳಿಯಿಂದ ತಪ್ಪಿಸಿಕೊಂಡಿದ್ದರು. ದಲಾಲ್ ಮತ್ತು ಶಾಹ್‌ಪುರ್ ಅಲ್ಲಿಂದ ತಪ್ಪಿಸಿಕೊಂಡಿದ್ದರೂ ಆಮೇಲೆ ಬಂಧನಕ್ಕೊಳಗಾಗಿದ್ದರು. ಖಾಲೀದ್ ಮೇಲಿನ ಹಲ್ಲೆ ದೇಶಕ್ಕೆ ಸ್ವಾತಂತ್ರ್ಯೋತ್ಸವದ ಕೊಡುಗೆ ಎಂದಿದ್ದರು ಆರೋಪಿಗಳು.
ಈ ಪ್ರಕರಣದಲ್ಲಿ ದಲಾಲ್ ಜಾಮೀನು ಪಡೆದು ಹೊರಬಂದಿದ್ದು, ಪ್ರಕರಣ ಸೆಷನ್ಸ್ ಕೋರ್ಟ್‌ನಲ್ಲಿದೆ.
ಪ್ರಕರಣದ ಬಗ್ಗೆ ಕೇಳಿದಾಗ, ನಾನು ಈ ಹೊತ್ತಲ್ಲಿ ಅದರ ಬಗ್ಗೆ ಏನೂ ಮಾತನಾಡುವುದಿಲ್ಲ. ಅದು ಉಮರ್ ಖಾಲಿದ್‌ಗೆ ಮಾತ್ರ ಸಂಬಂಧಿಸಿದ್ದು ಅಲ್ಲ.ಅದರಲ್ಲಿ ತುಂಬಾ ವಿಷಯವಿದೆ. ನಾನು ಅದರ ಬಗ್ಗೆ ಇನ್ನೊಂದು ದಿನ ಮಾತನಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:‘ಖಾಲಿದ್ ವಿರುದ್ಧದ ಆರೋಪ ಕಟ್ಟುಕತೆ’
ದಲಾಲ್‌ಗೆ ಖಾಲಿದ್ ಜತೆ ಯಾವುದೇ ವೈಯಕ್ತಿಕ ಶತ್ರುತ್ವ ಇಲ್ಲ. ರಾಜಧಾನಿಯಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವ ಜನರ ವಿರುದ್ಧ ದಲಾಲ್‌ಗೆ ಸಿಟ್ಟು ಇದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುವುದರ ಬಗ್ಗೆಯೂ ಅಸಮಧಾನ ಇದೆ. ನವೀನ್ ಅವರ ದೃಷ್ಟಿಯಿಂದ ನೋಡಿದರೆ ಅದು ದೇಶ ಪ್ರೇಮವನ್ನು ವ್ಯಕ್ತ ಪಡಿಸುವ ರೀತಿ ಎಂದು ವಿಕ್ರಮ್ ಯಾದವ್ ಸಮರ್ಥಿಸಿಕೊಂಡಿದ್ದಾರೆ.
ಚುನಾವಣಾ ಅಫಿಡವಿಟ್‌ನಲ್ಲಿ ತನ್ನ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ಇವೆ ಎಂದು ನವೀನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.