ADVERTISEMENT

ಸಂವಿಧಾನ ಪಾಲಿಸಲು ರಾಜ್ಯಪಾಲರಿಗೆ ಇಷ್ಟವಿಲ್ಲವೆಂಬುದು ಸಾಬೀತು: ಸಂಜಯ್ ರಾವುತ್

ಏಜೆನ್ಸೀಸ್
Published 13 ಅಕ್ಟೋಬರ್ 2020, 13:22 IST
Last Updated 13 ಅಕ್ಟೋಬರ್ 2020, 13:22 IST
ಸಂಜಯ್ ರಾವುತ್ (ಸಂಗ್ರಹ ಚಿತ್ರ)
ಸಂಜಯ್ ರಾವುತ್ (ಸಂಗ್ರಹ ಚಿತ್ರ)   

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದಿರುವ ಪತ್ರವು ಸಂವಿಧಾನವನ್ನು ಪಾಲಿಸಲು ಅವರಿಗೆ ಇಷ್ಟವಿಲ್ಲ ಎಂಬುದನ್ನು ಸಾಬೀತುಮಾಡಿದೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.

ರಾಜ್ಯದಲ್ಲಿ ದೇಗುಲಗಳು ಮತ್ತು ಧಾರ್ಮಿಕ ಕೇಂದ್ರಗಳ ಪುನರಾರಂಭಕ್ಕೆ ಸಂಬಂಧಿಸಿ ರಾಜ್ಯಪಾಲರು ಬರೆದಿರುವ ಪತ್ರವನ್ನು ಉಲ್ಲೇಖಿಸಿ ರಾವುತ್ ಈ ಹೇಳಿಕೆ ನೀಡಿದ್ದಾರೆ.

‘ಕೋವಿಡ್‌–19 ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಂವಿಧಾನದಲ್ಲಿ ಉಲ್ಲೇಖಿಸಿರುವ ಜಾತ್ಯತೀತತೆಯ ನಿಜಾರ್ಥವನ್ನು ಪಾಲಿಸಿಕೊಂಡು ಮಹಾರಾಷ್ಟ್ರ ಸರ್ಕಾರವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ರಾಜ್ಯಪಾಲರ ಪತ್ರವು ಅವರು ಭಾರತೀಯ ಸಂವಿಧಾನವನ್ನು ಪಾಲಿಸುವುದನ್ನು ಇಷ್ಟಪಡುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ’ ಎಂದು ರಾವುತ್ ಹೇಳಿದ್ದಾರೆ.

ADVERTISEMENT

‘ಶಿವಸೇನಾ ಎಂದಿಗೂ ಹಿಂದುತ್ವವನ್ನು ನಿರಾಕರಿಸಿಲ್ಲ. ಅದನ್ನು ಮರೆಯುವುದೂ ಇಲ್ಲ. ಹಿಂದುತ್ವ ಎಂಬುದು ಶಿವಸೇನಾದ ಆತ್ಮ. ಶಿವಸೇನಾವನ್ನು ಪ್ರಶ್ನಿಸಿದವರು ಈ ವಿಚಾರದ ಬಗ್ಗೆ ಸ್ವಯಂ ವಿಮರ್ಶಿಸಿಕೊಳ್ಳಲಿ. ಉದ್ಧವ್ ಠಾಕ್ರೆ ನೇತೃತ್ವದ ಮೂರು ಪಕ್ಷಗಳ ಮೈತ್ರಿಯ ರಾಜ್ಯ ಸರ್ಕಾರವು ಗಟ್ಟಿಯಾಗಿದೆ ಹಾಗೂ ನಿಯಮಗಳನ್ನು ಅನುಸರಿಸುತ್ತಿದೆ. ಸಂವಿಧಾನವನ್ನು ಪಾಲಿಸುತ್ತಿದೆ’ ಎಂದೂ ಅವರು ಹೇಳಿದ್ದಾರೆ.

‘ದೇಗುಲಗಳನ್ನು ಬಾರ್‌ಗಳ ಜತೆ ಹೋಲಿಸುವುದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ಕೊರೊನಾ ಭೀತಿಯು ಇನ್ನೂ ಮುಗಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಹ ಹೇಳಿದ್ದಾರೆ. ದೇಶದ ಪ್ರಧಾನಿಯವರೇ ಇಲ್ಲಿನ ಪರಿಸ್ಥಿತಿಯ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದ ಮೇಲೆ ರಾಜ್ಯಪಾಲರೂ ಯೋಚಿಸಬೇಕು’ ಎಂದು ರಾವುತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.