ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ ಶಿಂದೆ ಅವರೇ ಮುಂದುವರಿಯಬೇಕು ಎಂದು ಎಂದು ಶಿವಸೇನೆ ನಾಯಕ ದೀಪಕ್ ಕೇಸರ್ಕರ್ ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಭಾರಿ ಗೆಲುವಿನ ಬಳಿಕ ಶಿಂದೆ ಅವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ರಾಜ್ಯದ 288 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 230 ಸ್ಥಾನಗಳಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಶಿಂದೆ ನಾಯಕತ್ವದಲ್ಲಿ ಮಹಾಯುತಿಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿ ಶಿಂದೆ ಅವರೇ ಸಿಎಂ ಆಗಿ ಮುಂದುವರಿಯಬೇಕೆಂದು ಶಿವಸೇನೆ ಶಾಸಕರು ಬಯಸುತ್ತಾರೆ ಎಂದು ಕೇಸರ್ಕರ್‘ ತಿಳಿಸಿದ್ದಾರೆ.
ಮಹಾಯುತಿ ಮೈತ್ರಿಕೂಟದ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಆ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ನಿರ್ಧಾರ ಯಾವುದೇ ಇರಲಿ, ಅದು ರಾಜ್ಯದ ಹಿತಕ್ಕಾಗಿಯೇ ಎಂಬುವುದು ಸ್ಪಷ್ಟವಾಗಿರುತ್ತದೆ ಎಂದು ಕೇಸರ್ಕರ್ ಹೇಳಿದ್ದಾರೆ.
ರಾಜ್ಯದ ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ನಾಯಕರು ಹಾಗೂ ಬಿಜೆಪಿ ನಿರ್ಧರಿಸಲಿದೆ’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.