ADVERTISEMENT

ಶಿವಸೇನಾ ಬಣಗಳ ನಡುವಿನ ಸಮರ ಉಲ್ಬಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 14:52 IST
Last Updated 12 ನವೆಂಬರ್ 2023, 14:52 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: 2024ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಹಾಗೂ ಅನರ್ಹತೆ ಪ್ರಕ್ರಿಯೆ ವೇಗ ಪಡೆಯುತ್ತಿದ್ದಂತೆ, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂದೆ ನೇತೃತ್ವದ ಉಭಯ ಶಿವಸೇನೆ ಬಣಗಳ ನಡುವಿನ ವಾಕ್ಸಮರ ಮಹಾರಾಷ್ಟ್ರದಲ್ಲಿ ಉಲ್ಬಣಗೊಳ್ಳುತ್ತಿದೆ.

2022ರ ಜೂನ್ ತಿಂಗಳಲ್ಲಿ ಶಿಂದೆ ಅವರು ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಉರುಳಿಸಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಈಗ ಪಕ್ಷದ ಹೆಸರು ‘ಶಿವಸೇನಾ’ ಮತ್ತು ಪಕ್ಷದ ‘ಬಿಲ್ಲು-ಬಾಣ’ ಚಿಹ್ನೆಯ ಮೇಲೆ ಹಿಡಿತ ಹೊಂದಿದ್ದಾರೆ.

ಮುಖ್ಯಮಂತ್ರಿ ಶಿಂದೆ ಹಾಗೂ ಅವರ ಬಣದ ಶಾಸಕರ ಅನರ್ಹತೆ ಸಂಬಂಧ ಸಲ್ಲಿಸಿರುವ ಅರ್ಜಿಗಳನ್ನು ಡಿಸೆಂಬರ್‌ 31ರೊಳಗೆ ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ. ಈಗ ಶಿಂದೆ ಪ್ರಮುಖ ಸವಾಲು ಎದುರಿಸುತ್ತಿದ್ದಾರೆ. 

ADVERTISEMENT

ಮಹಾರಾಷ್ಟ್ರ ವಿಧಾನಸಭೆಯ ನಾಗಪುರ ಅಧಿವೇಶನವು ಡಿಸೆಂಬರ್ 7ರಿಂದ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವ ಕಾರಣ ಉಭಯ ಬಣಗಳು ಸಕ್ರಿಯವಾಗಿವೆ.

ಕಳೆದ 25ರಿಂದ 30 ವರ್ಷಗಳಿಂದ ಇದ್ದ ‘ಶಾಖಾ’ (ಪಕ್ಷದ ಸ್ಥಳೀಯ ಕಚೇರಿ) ಕಟ್ಟಡ ನೆಲಸಮಗೊಳಿಸುವ ವಿಚಾರದಲ್ಲಿ ಕೆಲ ದಿನಗಳಿಂದ ಮುಂಬ್ರಾದಲ್ಲಿ ಉದ್ವಿಗ್ನತೆ ಉಂಟಾಗಿದೆ. ಕಚೇರಿಯನ್ನು ನವೆಂಬರ್ 3ರಂದು ಕೆಡವಲಾಯಿತು. ಶಿಂದೆ ಬಣದ ಸದಸ್ಯರು ಅದರ ನಿಯಂತ್ರಣ ತೆಗೆದುಕೊಂಡ ಬಳಿಕ ಕೆಲಸ ಪ್ರಾರಂಭಿಸಲು ಹಡಗು ಕಂಟೇನರ್‌ ಇರಿಸಿದರು. 

ಈ ಘಟನೆಯು ಠಾಕ್ರೆ ಅವರು ಸ್ಥಳಕ್ಕೆ ಭೇಟಿ ನೀಡುವಂತೆ ಮಾಡಿತು. ಆದರೆ, ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದ ಕಾರಣ ಅವರಿಗೆ ಒಳಗೆ ಹೋಗಲು ಆಗಲಿಲ್ಲ.

‘ನೀವು ಪೋಸ್ಟರ್‌ಗಳನ್ನು ಹರಿದುಹಾಕಿದ ರೀತಿಯಲ್ಲಿ, ಮುಂದಿನ ಚುನಾವಣೆಯಲ್ಲಿ ನಾವು ನಿಮ್ಮನ್ನು ಹರಿದುಹಾಕುತ್ತೇವೆ. ಅಧಿಕಾರದಲ್ಲಿ ಉನ್ನತ ಸ್ಥಾನದಲ್ಲಿರುವ ಗದ್ದರ್‌ಗಳಿಗೆ (ದ್ರೋಹಿಗಳಿಗೆ) ಪಾಠ ಕಲಿಸಲಾಗುವುದು. ಸ್ಥಳೀಯ ಆಡಳಿತ ಮತ್ತು ಪೊಲೀಸರು ಅಸಹಾಯಕರಾಗಿದ್ದಾರೆ ಎಂದು ತೋರುತ್ತದೆ’ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು. 

ಮುಂಬ್ರಾದ ಜನರು ಅವರ (ಠಾಕ್ರೆ) ಭೇಟಿ ಸಮಯದಲ್ಲಿ ತಮ್ಮ ಶಕ್ತಿ ತೋರಿಸಿದರು. ಜನರ ಶಕ್ತಿಯ ಮುಂದೆ ಅವರ ಆಟ ಏನೂ ನಡೆಯುವುದಿಲ್ಲ ಎಂದು ಉದ್ದವ್‌ ಠಾಕ್ರೆ ವಿರುದ್ಧ ಶಿಂದೆ ವಾಗ್ದಾಳಿ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.