ADVERTISEMENT

ಮಹಾರಾಷ್ಟ್ರ ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: UPಯಲ್ಲಿ ಫ್ಯಾಬ್ರಿಕೇಟರ್‌ ಬಂಧನ

ಪಿಟಿಐ
Published 18 ಅಕ್ಟೋಬರ್ 2024, 9:38 IST
Last Updated 18 ಅಕ್ಟೋಬರ್ 2024, 9:38 IST
<div class="paragraphs"><p>ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ&nbsp; ರಾಜ್‌ಕೋಟ್‌ ಕೋಟೆಯ ಆವರಣದಲ್ಲಿ ಕುಸಿದ&nbsp;ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ </p></div>

ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ  ರಾಜ್‌ಕೋಟ್‌ ಕೋಟೆಯ ಆವರಣದಲ್ಲಿ ಕುಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ

   

ಮುಂಬೈ: ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯಲ್ಲಿ ಸ್ಥಾಪಿಸಿದ್ದ ಒಂದು ವರ್ಷದೊಳಗೇ ಕುಸಿದ ಶಿವಾಜಿ ಪ್ರತಿಮೆಯನ್ನು ಸಿದ್ಧಗೊಳಿಸಿದ್ದ ಫ್ರಾಬ್ರಿಕೇಟರ್‌ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪರಮೇಶ್ವರ ರಾಮನರೇಶ್ ಯಾದವ್‌ ಎಂದು ಗುರುತಿಸಲಾಗಿದೆ. 35 ಅಡಿ ಎತ್ತರದ ಪ್ರತಿಮೆ ಸಿದ್ಧಪಡಿಸಲು ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪ್ರತಿಮೆ ಕುಸಿತ ಪ್ರಕರಣವು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು.

ADVERTISEMENT

ಪ್ರತಿಮೆ ಕುಸಿತ ಪ್ರಕರಣದಲ್ಲಿ ಮಿರ್ಜಾಪುರದವರಾದ ಯಾದವ್ ಪಾತ್ರ ಬೆಳಕಿಗೆ ಬಂದ ತಕ್ಷಣ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರತಿಮೆ ಸಿದ್ಧಪಡಿಸುವ ಕಾರ್ಯದಲ್ಲಿ ಪ್ರಮುಖ ಭಾಗಗಳಲ್ಲಿ ಬೆಸುಗೆ ಹಾಕುವ ಕೆಲಸ ಈತನದ್ದಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಮೆ ಕುಸಿದ ನಂತರ ತಾಂತ್ರಿಕ ತಂಡವು ಸ್ಥಳ ಪರಿಶೀಲನೆ ನಡೆಸಿತ್ತು. ಇದರಲ್ಲಿ ಪ್ರತಿಮೆಯ ಕೆಲ ಭಾಗಗಳಿಗೆ ತುಕ್ಕು ಹಿಡಿದಿರುವುದು ಪತ್ತೆಯಾಗಿತ್ತು. ಕಳಪೆ ಗುಣಮಟ್ಟದ ಕಚ್ಚಾ ಸಾಮಗ್ರಿಗಳ ಬಳಕೆಯೇ ಇದಕ್ಕೆ ಕಾರಣ ಎಂದು ತಂಡ ಅಭಿಪ್ರಾಯಪಟ್ಟಿತ್ತು. ಯಾದವ್‌ ಬಂಧನದ ನಂತರ ಪೊಲೀಸರು ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದರು. ಪೊಲೀಸರ ಮನವಿಯಂತೆ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

17ನೇ ಶತಮಾನದ ಮರಾಠ ಚಕ್ರವರ್ತಿಯಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಡಿ. 4ರಂದು ರಾಜ್‌ಕೋಟ್‌ ಕೋಟೆಯ ಆವರಣದಲ್ಲಿ ಅನಾವರಣಗೊಳಿಸಿದ್ದರು. ಆದರೆ 2024ರ 26ರಂದು ಬೀಸಿದ ಭಾರಿ ಗಾಳಿಗೆ ಪ್ರತಿಮೆ ಕುಸಿದು ಬಿದ್ದಿತು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಮೆಯ ಗುತ್ತಿಗೆದಾರ ಜಯದೀಪ್ ಆಫ್ಟೆ ಹಾಗೂ ಕನ್ಸಲ್ಟಂಟ್‌ ಚೇತನ್ ಪಾಟೀಲ್‌ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.