ಮುಂಬೈ: ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜ ಅವರ ಬೃಹತ್ ಪ್ರತಿಮೆ ಕುಸಿದುಬಿದ್ದ ವಿಚಾರವು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ವಿರೋಧ ಪಕ್ಷಗಳ ಒಕ್ಕೂಟ ಮಹಾ ವಿಕಾಸ ಆಘಾಡಿ (ಎಂವಿಎಸ್) ಒತ್ತಾಯಿಸಿದೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿದ್ದ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆ ಸೋಮವಾರ ಕುಸಿದಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 4ರಂದು ಅನಾವರಣ ಮಾಡಿದ್ದರು.
ಈ ಬೆನ್ನಲ್ಲೇ ಮಹಾ ವಿಕಾಸ ಆಘಾಡಿಯು, ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ವಿರುದ್ಧ ಹರಿಹಾಯ್ದಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರ, ನೂತನ ಸಂಸತ್, ಸಮೃದ್ಧಿ ಕಾರಿಡಾರ್, ಅಟಲ್ ಸೇತುವೆ ಇತ್ತಿತರ ಕಟ್ಟಡಗಳಲ್ಲೂ ಸಮಸ್ಯೆ ಕಂಡುಬಂದಿದೆ’ ಎಂದು ವಾಗ್ದಾಳಿ ನಡೆಸಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು,‘ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಮತ್ತು ಕೇಂದ್ರ ಸರ್ಕಾರದತ್ತ ಬೆರಳು ತೋರುತ್ತಿದೆ. ಛತ್ರಪತಿ ಮಹಾರಾಜರನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಮಹಾರಾಷ್ಟ್ರದ ಬಿಜೆಪಿ ಸಮ್ಮಿಶ್ರ ಸರ್ಕಾರವು ಕಮಿಷನ್ ಏಜೆಂಟ್. ಇದು ಸಿಮೆಂಟ್, ಮರಳು, ಇಟ್ಟಿಗೆ, ಕಬ್ಬಿಣ ಎಲ್ಲದರಲ್ಲೂ ಕಮಿಷನ್ ಪಡೆಯುತ್ತಿದೆ. ಪ್ರತಿಮೆ ನಿರ್ಮಾಣಕ್ಕೆ ₹2.36 ಕೋಟಿ ವ್ಯಯಿಸಲಾಗಿದೆ. ಅನುಭವವೇ ಇಲ್ಲದ ಶಿಲ್ಪಿ ಜಯದೀಪ್ ಆಪ್ಟೆ ಅವರಿಗೆ ನಿರ್ಮಾಣದ ಹೊಣೆ ನೀಡಲಾಗಿತ್ತು. ಕ್ರೆಡಿಟ್ ಮತ್ತು ಕಮಿಷನ್ ಆಸೆಯಿಂದ ಸರ್ಕಾರ ಗುಣಮಟ್ಟಕ್ಕೆ ಆದ್ಯತೆ ನೀಡಿಲ್ಲ’ ಎಂದು ಆರೋಪಿಸಿದರು.
ಶಿವಸೇನೆ (ಉದ್ಧವ್ ಬಣ) ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರು, ‘ಶಿವಾಜಿ ಮಹಾರಾಜರನ್ನು ಔರಂಗಜೇಬ್ ಮತ್ತು ಮೊಘಲರು ಸಹ ಈ ರೀತಿ ಅವಮಾನಿಸಿರಲಿಲ್ಲ. ಮುಖ್ಯಮಂತ್ರಿ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.