ADVERTISEMENT

ಮಹಾರಾಷ್ಟ್ರದ ಎಲ್ಲ ಜಿಲ್ಲೆಗಳಲ್ಲಿ ಶಿವಾಜಿ ದೇಗುಲ: ಉದ್ಧವ್‌ ಠಾಕ್ರೆ

ಪಿಟಿಐ
Published 7 ನವೆಂಬರ್ 2024, 14:33 IST
Last Updated 7 ನವೆಂಬರ್ 2024, 14:33 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮಹಾರಾಷ್ಟ್ರದ ಎಲ್ಲ ಜಿಲ್ಲೆಗಳಲ್ಲಿ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯಗಳನ್ನು ನಿರ್ಮಿಸುವುದಾಗಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಭರವಸೆ ನೀಡಿದ್ದಾರೆ. ಇದಕ್ಕೆ, ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣ ತೀವ್ರ ಪ್ರತಿಕ್ರಿಯೆ ನೀಡಿದೆ.

ಶಿವಾಜಿ ಪಾರ್ಕ್‌ನಲ್ಲಿ ನಡೆದ ದಸರಾ ರ್‍ಯಾಲಿಯಲ್ಲಿ ಮಾತನಾಡಿದ ಉದ್ಧವ್‌ ಅವರು, ಮಹಾರಾಷ್ಟ್ರದ ಪ್ರತಿ ಜಿಲ್ಲೆಗಳಲ್ಲಿ ಮತ್ತು ದೇಶದ ಪ್ರತಿ ರಾಜ್ಯಗಳಲ್ಲಿ ಶಿವಾಜಿ ಮಹಾರಾಜರ ದೇವಾಲಯಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿದರು. ಈ ದೇವಾಲಯಗಳು ಶಿವಾಜಿ ಅವರ ಜೀವನ ಚರಿತ್ರೆಯನ್ನು ಒಳಗೊಂಡಿರುತ್ತದೆ. ಅದರಿಂದ ಜನರು ಸ್ಫೂರ್ತಿ ಪಡೆಯಬಹುದು ಎಂದು ತಿಳಿಸಿದರು. ಠಾಕ್ರೆ ಅವರು ತಮ್ಮ ಚುನಾವಣಾ ರ್‍ಯಾಲಿಗಳಲ್ಲಿ ಈ ಕುರಿತು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಮಗ, ಸಂಸದ ಡಾ. ಶ್ರೀಕಾಂತ್‌ ಶಿಂದೆ ಅವರು ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಶಿಂದೆ ಬಣದ ವಾಗ್ದಾಳಿ: ‘ಹಿಂದೂ ಧರ್ಮ ಮತ್ತು ಬಾಳಾಸಾಹೇಬ್‌ ಠಾಕ್ರೆ ಅವರ ಆದರ್ಶಗಳಿಂದ ದೂರವಿದ್ದವರು ಈಗ ಛತ್ರಪತಿ ಶಿವಾಜಿ ಅವರಿಗೆ ದೇವಾಲಯಗಳನ್ನು ನಿರ್ಮಿಸಲು ಮುಂದಾಗಿದ್ದಾರೆ’ ಎಂದು ಸಂಸದ ಡಾ. ಶ್ರೀಕಾಂತ್‌ ಶಿಂದೆ ಟೀಕಿಸಿದ್ದಾರೆ.

ಬಾಳಾಸಾಹೇಬರು ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ದೃಢವಾಗಿ ನಿಂತಿದ್ದರು. ಆದರೆ ಕೆಲವರು ಈಗ ಅಧಿಕಾರಕ್ಕಾಗಿ ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದಿದ್ದರೆ.

ಶಿವಸೇನಾದ (ಯಬಿಟಿ) ಪ್ರಣಾಳಿಕೆ ಬಿಡುಗಡೆ ಮಾಡಿದ ಠಾಕ್ರೆ

ವಿದ್ಯಾರ್ಥಿನಿಯರಿಗೆ ಸಿಗುತ್ತಿರುವ ಉಚಿತ ಶಿಕ್ಷಣ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಣೆ ಅಗತ್ಯ ವಸ್ತುಗಳ ಬೆಲೆ ಸ್ಥಿರೀಕರಣ ಧಾರಾವಿ ಪುನರಾಭಿವೃದ್ಧಿ ಯೋಜನೆ ರದ್ದು ಸೇರಿದಂತೆ ಹಲವು ಭರವಸೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಗುರುವಾರ ಬಿಡುಗಡೆ ಮಾಡಿದೆ. ಠಾಕ್ರೆ ಅವರು ಮುಂಬೈನ ತಮ್ಮ ನಿವಾಸ ‘ಮಾತೋಶ್ರೀ’ಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿ ನೀಡಿರುವ ಬಹುತೇಕ ಭರವಸೆಗಳನ್ನೂ ಪ್ರಣಾಳಿಕೆ ಒಳಗೊಂಡಿದೆ. ಪ್ರಣಾಳಿಕೆಯ ಪ್ರಮುಖಾಂಶಗಳು: * ಮಹಾರಾಷ್ಟ್ರದ ಎಲ್ಲ ಜಿಲ್ಲೆಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯ ಸ್ಥಾಪನೆ * ಹಳೆ ಪಿಂಚಣಿ ಯೋಜನೆ ಜಾರಿ ಮತ್ತು ಮೀಸಲಾತಿಗಿರುವ ಶೇ 50ರ ಮಿತಿ ತೆರವು * ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ * ರಾಜ್ಯ ಪೊಲಿಸ್‌ ಪಡೆಗೆ 18000 ಮಹಿಳೆಯರನ್ನು ನೇಮಿಸಿಕೊಳ್ಳುವುದರ ಜತೆಗೆ ಮಹಿಳಾ ಪೊಲೀಸ್‌ ಠಾಣೆಗಳ ಸ್ಥಾಪನೆ * ನಗರೀಕರಣಕ್ಕೆ ವೇಗ ನೀಡುವ ಉದ್ದೇಶದಿಂದ ಮಹಾರಾಷ್ಟ್ರ ಮತ್ತು ಮುಂಬೈಗೆ ಗೃಹ ನಿರ್ಮಾಣ ನೀತಿ * ನಗರ ಅರೆ ನಗರ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುವ ದರಕ್ಕೆ ಮನೆಗಳ ನಿರ್ಮಾಣ * ಪ್ರತಿ ಜಿಲ್ಲೆಯಲ್ಲಿ ಮೂರು ತಿಂಗಳಿಗೊಮ್ಮೆ ಉದ್ಯೋಗ ಮೇಳ * ರಾಜ್ಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ಕೇಂದ್ರ ಸ್ಥಾಪನೆ

ಮನೆಯಲ್ಲಿ ಪ್ರಣಾಳಿಕೆ ಬಿಡುಗಡೆ:

ಬಿಜೆಪಿ ಟೀಕೆ ಉದ್ಧವ್‌ ಠಾಕ್ರೆ ಅವರು ತಮ್ಮ ಮನೆಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವುದನ್ನು ಬಿಜೆಪಿ ಟೀಕಿಸಿದೆ. ಈ ಮೂಲಕ ಉದ್ಧವ್‌ ಠಾಕ್ರೆ ಅವರು ತಮ್ಮ ಕುಟುಂಬಕ್ಕಷ್ಟೇ ಗಮನ ನೀಡುತ್ತಾರೆ ಮತ್ತು ದೊಡ್ಡ ಸಮುದಾಯವನ್ನು ನಿರ್ಲಕ್ಷಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬಾವನಕುಲೆ ಟೀಕಿಸಿದ್ದಾರೆ. ‘ನಿಜವಾದ ನಾಯಕ ಜನರ ಸೇವೆಗಾಗಿ ಅವರ ಮನೆ ಬಾಗಿಲಿಗೆ ಹೋಗಲು ಸಿದ್ಧನಿರುತ್ತಾನೆಯೇ ಹೊರತು ಮನೆಯೊಳಗೇ ಇರಲು ಬಯಸುವುದಿಲ್ಲ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.