ADVERTISEMENT

ಶಿವಲಿಂಗದ ಮೇಲೆ ಚೇಳು: ಮೋದಿ ವಿರುದ್ಧದ ಈ ಟೀಕೆ 6 ವರ್ಷ ಹಳೆಯದು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 9:40 IST
Last Updated 30 ಅಕ್ಟೋಬರ್ 2018, 9:40 IST
   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲೆ ಇರುವ ಚೇಳು ಇದ್ದಂತೆ. ಕೈಯಿಂದ ದೂರ ಸರಿಸಲು ಆಗದು, ಚಪ್ಪಲಿಯಿಂದ ಹೊಡೆಯಲು ಸಾಧ್ಯವಾಗದು’ ಎಂದುಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಮೋದಿಯನ್ನು ಕಾಂಗ್ರೆಸ್ ನಾಯಕ ಶಶಿತರೂರ್ ಟೀಕಿಸಿದ್ದರು. ರಾಜಕೀಯ ವಲಯದಲ್ಲಿ ಈ ಹೇಳಿಕೆ ಸಂಚಲನವನ್ನೇ ಸೃಷ್ಟಿಸಿತ್ತು. ಬಿಜೆಪಿಯ ನಾಯಕರು ರಾಹುಲ್‌ ಗಾಂಧಿಯ ಪ್ರತಿಕ್ರಿಯೆಗಾಗಿ ಆಗ್ರಹಿಸಿದ್ದರು.

ಈ ಹೇಳಿಕೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘ನೀವು ಶಶಿತರೂರ್ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದಾದರೆ ಎಲ್ಲ ಹಿಂದೂಗಳ ಕ್ಷಮೆಯಾಚಿಸಬೇಕು’ ಎಂದು ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದರು. ಈ ಕುರಿತು ಟ್ವಿಟ್ ಮಾಡಿದ್ದ ಪ್ರಸಾದ್, ‘ಮಹಾತ್ಮಾ ಗಾಂಧಿ, ಜವಹರ್‌ಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರ ಪರಂಪರೆಯನ್ನು ಪ್ರತಿನಿಧಿಸುವುದಾಗಿ ಕಾಂಗ್ರೆಸ್ ಹೇಳಿಕೊಳ್ಳುತ್ತೆ. ಆದರೆ ರಾಹುಲ್ ಗಾಂಧಿ ನಾಯಕತ್ವದಲ್ಲಿ ಈ ಪಕ್ಷವು ಆಧಾರರಹಿತ ಆರೋಪಗಳನ್ನು ಮಾಡುವ ಪಕ್ಷವಾಗಿ ಬದಲಾಗಿದೆ’ ಎಂದು ಟೀಕಿಸಿದ್ದರು.

‘ಕೊಲೆ ಆರೋಪ ಎದುರಿಸುತ್ತಿರುವ ತರೂರ್‌ ಹೇಳಿಕೆಗೆ ಪ್ರತಿಕ್ರಿಯಿಸಿ ಅವರಿಗೆ ಮತ್ತಷ್ಟು ಆದ್ಯತೆ ಸಿಗುವಂತೆ ಮಾಡಲು ನನಗೆ ಇಷ್ಟವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮನ್ನು ತಾವು ಶಿವಭಕ್ತ ಎಂದು ಕರೆದುಕೊಳ್ಳುತ್ತಾರೆ. ಅವರ ಪಕ್ಷದ ಓರ್ವ ನಾಯಕ ಶಿವಲಿಂಗವನ್ನು ಅಂದರೆ ಮಹಾದೇವನ ಪಾವಿತ್ರ್ಯಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ಕೋಟ್ಯಂತರ ಹಿಂದೂಗಳ ಆರಾಧ್ಯ ದೈವದ ಬಗ್ಗೆ ಕಾಂಗ್ರೆಸ್ ನಾಯಕನ ಹೇಳಿಕೆ ಅಕ್ಷಮ್ಯ’ ಎಂದು ಆಕ್ಷೇಪಿಸಿದ್ದರು.

ADVERTISEMENT

ಹಿಂದೂಧರ್ಮದ ಬಗ್ಗೆ ಅಧ್ಯಯನ ಮಾಡಿರುವ ತಜ್ಞರಾದ ಡೇವಿಡ್ ಫ್ರಾಲೆ ಅವರು, ‘ನಿಮ್ಮ ಸ್ವಂತ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಹೆಸರು ಹೇಳದ ಮೂಲಗಳನ್ನು ಉಲ್ಲೇಖಿಸುತ್ತೀರಿ. ನಿಮ್ಮ ಪ್ರಕಾರ ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳು. ಮೋದಿಯನ್ನು ನಿಂದಿಸಲು ದೇವರಾದ ಶಿವನನ್ನು ಎಳೆದು ತಂದಿದ್ದೀರಿ. ಹಿಂದೂ ಧರ್ಮದ ಬಗ್ಗೆ ಅವರಿಗೆ ಇರುವ ಅಭಿಪ್ರಾಯ ತಿಳಿದುಕೊಳ್ಳಲು ಈ ಹೇಳಿಕೆ ಸಾಲದೇ?’ ಎಂದು ಟ್ವಿಟ್ ಮಾಡಿದ್ದರು.

ತರೂರ್ ಹೇಳಿದ್ದೇನು?

ತರೂರ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ. ಎಎನ್‌ಐ ಸುದ್ದಿಸಂಸ್ಥೆ ಟ್ವಿಟ್ ಮಾಡಿರುವ ವಿಡಿಯೊದಲ್ಲಿ ಹೀಗಿದೆ. ‘ಕ್ಯಾರವಾನ್‌ನ ಪತ್ರಕರ್ತ ವಿನೋದ್ ಜೋಸ್ ಅವರಿಗೆ ಹೆಸರು ಹೇಳಲು ಇಚ್ಛಿಸದ ಆರ್‌ಎಸ್‌ಎಸ್‌ ಸ್ವಯಂ ಸೇವಕರೊಬ್ಬರು ಹೀಗೆ ಹೇಳಿದ್ದರು. ಅದನ್ನೇ ನಾನು ಈಗ ಉದ್ಧರಿಸುತ್ತೇನೆ. ಈ ಹೇಳಿಕೆಯು ಮೋದಿ ಅವರ ಪ್ರಭಾವ ಹತ್ತಿಕ್ಕಲು ಆಗದ ಆರ್‌ಎಸ್‌ಎಸ್‌ ಸ್ವಯಂಸೇವಕರೊಬ್ಬರ ಅಸಹಾಯಕತೆಯನ್ನು ಬಿಂಬಿಸುತ್ತದೆ.

ಹೆಸರು ಹೇಳಲು ಇಚ್ಛಿಸದ ಆರ್‌ಎಸ್‌ಎಸ್‌ ಮೂಲ ಏನು ಹೇಳಿತು ಎನ್ನುವ ಬಗ್ಗೆ ತರೂರ್ ಹೇಳುವುದು ಹೀಗೆ. ‘ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳು ಇದ್ದಂತೆ. ನೀವು ನಿಮ್ಮ ಕೈಯಿಂದ ಅದನ್ನು ದೂರ ಸರಿಸಲು ಆಗದು, ಚಪ್ಪಲಿಯಿಂದ ಹೊಡೆಯಲು ಆಗದು’. ತರೂರ್ ಈ ಹೇಳಿಕೆಯನ್ನು ಬೆಂಗಳೂರಿನಲ್ಲಿ ಈಚೆಗೆ ನಡೆದ ಸಾಹಿತ್ಯ ಉತ್ಸವದಲ್ಲಿ ನೀಡಿದ್ದರು.ತರೂರ್ ಅವರ ಈ ಹೇಳಿಕೆಯನ್ನು ಬಿಜೆಪಿಯ ಹಲವು ನಾಯಕರು ಮತ್ತು ಬೆಂಬಲಿಗರಲ್ಲಿ ಆಕ್ರೋಶ ಹುಟ್ಟುಹಾಕಿತ್ತು. ತರೂರ್ ಈ ಹೇಳಿಕೆಯನ್ನು ‘ದಿ ಕ್ಯಾರವಾನ್’ ನಿಯತಕಾಲಿಕೆಯ 2012ರ ಸಂಚಿಕೆಯಿಂದ ಉದ್ಧರಿಸಿದ್ದರು. ಆಗ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು.

ಕ್ಯಾರವಾನ್‌ಗೆ ಆರ್‌ಎಸ್‌ಎಸ್‌ ನಾಯಕ ಹೇಳಿದ್ದೇನು?

ತರೂರ್ ಉಲ್ಲೇಖಿಸಿರುವ ‘ದಿ ಕ್ಯಾರವಾನ್’ನ ವರದಿಯನ್ನು ಬೂಮ್ ವರದಿಗಾರರು ಹುಡುಕಿದ್ದಾರೆ. ‘ದಿ ಎಂಪರರ್ ಅನ್‌ಕ್ರೌನ್ಡ್‌– ದಿ ರೈಸ್ ಆಫ್ ನರೇಂದ್ರ ಮೋದಿ’ ಶೀರ್ಷಿಕೆಯ ಈ ವರದಿ ಮಾರ್ಚ್ 1, 2012ರಂದು ಪ್ರಕಟವಾಗಿದೆ. ಪತ್ರಿಕೆಯ ಅಂದಿನ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ.ಜೋಸ್ ಈ ವರದಿಯನ್ನು ಬರೆದಿದ್ದರು. ತರೂರ್ ಉಲ್ಲೇಖಿಸಿರುವ ಮಾತು ಲೇಖನದ ಮೊದಲ ಪ್ಯಾರಾದಲ್ಲಿಯೇ ಬರುತ್ತದೆ. ‘ನಾನು ಗುಜರಾತ್‌ನಿಂದ ಹೊರಡುವ ಸ್ವಲ್ಪ ಸಮಯ ಮೊದಲು ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರನ್ನು ಭೇಟಿಯಾಗಿದ್ದೆ. ಅವರು ಆಳವಾಗಿ ನಿಟ್ಟುಸಿರು ಬಿಡುತ್ತಾ ಶಿವಲಿಂಗ್ ಮೇ ಬಿಚ್ಚು ಬೇಟಾ ಹೈ. ನ ಉಸ್ಕೊ ಹಾತ್‌ ಸೆ ಉತಾರ್ ಸಕ್ತೆ ಹೋ, ನ ಉಸ್ಕೊ ಜೂಟಾ ಮಾರ್‌ ಸಕ್ತೆ ಹೋ’ (ಶಿವಲಿಂಗದ ಮೇಲೆ ಚೇಳು ಕುಳಿತಿದೆ. ಅದನ್ನು ಕೈಲಿ ಹೊಡೆದು ದೂರ ಸರಿಸಲು ಆಗುವುದಿಲ್ಲ. ಚಪ್ಪಲಿ ಏಟು ಹಾಕುವಂತಿಲ್ಲ) ಎಂದು ಬೇಸರ ತೋಡಿಕೊಂಡಿದ್ದರು’ ಎಂದು ಜೋಸ್ ಬರೆದಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ತರೂರ್ ವಿರುದ್ಧ ಆರೋಪಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಜೋಸ್ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಸ್ಪಷ್ಟನೆ ಪ್ರಕಟಿಸಿದ್ದಾರೆ.

‘ನರೇಂದ್ರ ಮೋದಿ ಬಗ್ಗೆ ಆರ್‌ಎಸ್‌ಎಸ್‌ ನಾಯಕರು ನನ್ನೆದುರು ಏಳು ವರ್ಷಗಳ ಹಿಂದೆ (ನ.2011) ನೀಡಿದ ಹೇಳಿಕೆಯನ್ನು ಶಶಿ ತರೂರ್ ಪುನರುಚ್ಚರಿಸಿದ್ದಾರೆ.ಚೇಳು–ಶಿವಲಿಂಗ ಹೇಳಿಕೆ ನೀಡಿದ್ದಕ್ಕಾಗಿ ಶಶಿ ತರೂರ್‌ ವಿರುದ್ಧ ಮುಗಿಬೀಳಲು ಬಿಜೆಪಿಯು ರವಿಶಂಕರ್ ಪ್ರಸಾದ್ ಅವರನ್ನು ನಿಯೋಜಿಸಿರುವುದು ಹಾಸ್ಯಾಸ್ಪದ. ಮೋದಿ ಅವರ ವ್ಯಕ್ತಿಚಿತ್ರ ಬರೆಯಲೆಂದು ನಾನು 105 ಜನರನ್ನು ಸಂದರ್ಶಿಸಿದ್ದೆ. ಅವರೆಲ್ಲರೂ ಮೋದಿ ಜೊತೆಗೆ ಕೆಲಸ ಮಾಡಿದ್ದವರು ಅಥವಾ ತೀರಾ ಹತ್ತಿರದಿಂದ ಮೋದಿ ಅವರನ್ನು ನೋಡಿದ್ದವರೇ ಆಗಿದ್ದರು. ಈ ಬರಹ ಕ್ಯಾರವಾನ್‌ನ 2012ರ ಮಾರ್ಚ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ನಾನು ಕಟ್ಟಿಕೊಟ್ಟಿದ್ದ ವ್ಯಕ್ತಿ ಚಿತ್ರಣ ಆಗ ಅನೇಕ ಭಾಷೆಗಳಿಗೆ ಅನುವಾದವಾಗಿತ್ತು. ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚೆಯೂ ಆಗಿತ್ತು. ಆಗಲೂ ಅಷ್ಟೇ, ಈಗಲೂ ಅಷ್ಟೇ ಮೋದಿ ಮತ್ತು ಅವರ ಸಹಚರರು ಆರ್‌ಎಸ್‌ಎಸ್‌ ನಾಯಕ ಯಾರು ಎಂದು ಪ್ರಶ್ನಿಸಲಿಲ್ಲ. ಆರ್‌ಎಸ್‌ಎಸ್‌ನ ಯಾರು ಇಂಥ ಹೇಳಿಕೆ ನೀಡಿದರು ಎಂದು ಆತ್ಮಶೋಧ ಮಾಡುವ ಬದಲು ಪ್ರಕಟಿತ ಹೇಳಿಕೆಯನ್ನು ಪುನರುಚ್ಚರಿಸಿದ ಮೂರನೇ ವ್ಯಕ್ತಿಯ ಮೇಲೆ (ಶಶಿ ತರೂರ್) ಮುಗಿಬಿದ್ದಿದ್ದಾರೆ’ ಎಂದು ಜೋಸ್ ಲೇವಡಿ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಕೆಲವರು ಜೋಸ್ ಅವರಿಗೆ ಸುದ್ದಿಮೂಲ ಬಹಿರಂಗಪಡಿಸಲು ಕೋರಿದ್ದರು. ‘ಸಾಧ್ಯವಿಲ್ಲ’ ಎಂದು ಜೋಸ್ ನಿರಾಕರಿಸಿದ್ದರು.

ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತ ಚೇಳು ಎಂದು ಗೋಧ್ರಾ ಹತ್ಯಾಕಾಂಡದ ವೇಳೆ ಗುಜರಾತ್‌ನ ಗೃಹ ಸಚಿವರಾಗಿದ್ದ ಗೋಡ್ರನ್ ಝಡಾಫಿಯಾ ಸಹ ಟೀಕಿಸಿದ್ದರು. ಯುಟ್ಯೂಬ್‌ನಲ್ಲಿ ಝಡಾಫಿಯಾ ಟೀಕೆಯ ವಿಡಿಯೊ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.