ಶಿಯೊಪುರ್: ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಎರಡನೇ ಬ್ಯಾಚ್‌ನ 12 ಚೀತಾಗಳು ಆಗಮಿಸಿವೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಚೀತಾಗಳನ್ನು ಉದ್ಯಾನಕ್ಕೆ ಬಿಟ್ಟಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಧ್ಯಪ್ರದೇಶಕ್ಕೆ ಮಹಾಶಿವರಾತ್ರಿಯಂದು ಉಡುಗೊರೆ ಸಿಕ್ಕಿದೆ.ದೂರದೃಷ್ಟಿ ಹೊಂದಿರುವ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ. ಕುನೊ ರಾಷ್ಟ್ರೀಯ ಉದ್ಯಾನದಲ್ಲಿರುವ ಚೀತಾಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮೊದಲ ಬ್ಯಾಚ್‌ನಲ್ಲಿ ಬಿಡುಗಡೆ ಮಾಡಿದ್ದ ಚೀತಾಗಳು ಇಲ್ಲಿನ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡಿವೆ ಎಂದು ಹೇಳಿದ್ದಾರೆ.
ಪರಿಸರ ಮತ್ತು ವನ್ಯಜೀವಿಗಳನ್ನು ರಕ್ಷಿಸುವುದು ಪ್ರಧಾನಿ ಮೋದಿಯವರ ದೂರದೃಷ್ಟಿಯಾಗಿದೆ. ಇದಕ್ಕೆ ಚೀತಾ ಯೋಜನೆ ಒಂದು ಉದಾಹರಣೆಯಾಗಿದೆ. ಚೀತಾಗಳನ್ನು ಸುರಕ್ಷಿತವಾಗಿ ಕರೆತಂದ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದು ಚೌಹಾಣ್ ತಿಳಿಸಿದ್ದಾರೆ.
6 ತಿಂಗಳ ಹಿಂದೆ ಇದೇ ರಕ್ಷಿತಾರಣ್ಯಕ್ಕೆ 8 ಚೀತಾಗಳನ್ನು ಬಿಡಲಾಗಿತ್ತು. ಮೊದಲು ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಗ್ವಾಲಿಯರ್‌ಗೆ ತರಲಾಗುತ್ತದೆ, ಬಳಿಕ, ಅವುಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಅವರು ಹೇಳಿದರು.
ನಿಯಮಗಳ ಪ್ರಕಾರ, ಚೀತಾಗಳನ್ನು ಒಂದು ತಿಂಗಳು ಕ್ವಾರಂಟೈನ್‌ನಲ್ಲಿ ಇಡಲಾಗುವುದು ಎಂದೂ ಅಧಿಕಾರಿ ತಿಳಿಸಿದ್ದಾರೆ.
ಸೆಪ್ಟೆಂಬರ್ 17ರಂದು ತಮ್ಮ ಹುಟ್ಟುಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿ, ನಮೀಬಿಯಾದಿಂದ ತರಲಾಗಿದ್ದ ಮೊದಲ ಬ್ಯಾಚ್‌ನ 8 ಚೀತಾಗಳನ್ನು (5 ಹೆಣ್ಣು, 3 ಗಂಡು) ಕುನೊ ರಾಷ್ಟ್ರೀಯ ಉದ್ಯಾನದ ಕ್ವಾರಂಟೈನ್ ವಲಯಕ್ಕೆ ಬಿಡುಗಡೆ ಮಾಡಿದ್ದರು.
ಭಾರತದಲ್ಲಿ ಚೀತಾಗಳ ಸಂತತಿ ನಶಿಸಿದ 7 ದಶಕಗಳ ಬಳಿಕ ಮತ್ತೆ ದೇಶಕ್ಕೆ ಚೀತಾಗಳನ್ನು ತರಲಾಗುತ್ತಿದೆ. 1947ರಲ್ಲಿ ಛತ್ತಿಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಕೊನೆಯ ಚೀತಾ ಮೃತಪಟ್ಟಿತ್ತು. 1952ರಲ್ಲಿ ದೇಶದಲ್ಲಿ ಚೀತಾ ಸಂತತಿ ನಶಿಸಿದೆ ಎಂದು ಘೊಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.