ಮುಜಾಫರ್‌ನಗರ: ತನ್ನ ಅಶ್ಲೀಲ ವಿಡಿಯೊವನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೇಷನ್ ಹೌಸ್ ಅಧಿಕಾರಿಯನ್ನು ಅವರ ಸ್ಥಾನದಿಂದ ಕೆಳಗಿಳಿಸಲಾಗಿದೆ.
‘ಭೋಪಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್ಒ) ದೀಪಕ್ ಚರ್ತುವೇದಿ ಸ್ಥಾನಕ್ಕೆ ಸುಭಾಷ್ ಬಾಬು ಅವರನ್ನು ನೇಮಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘25 ವರ್ಷದ ಮಹಿಳೆಯೊಬ್ಬರು ಮೂರು ತಿಂಗಳ ಹಿಂದೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಪಡೆದಿದ್ದರು. ಪತಿ ತನ್ನ ಅಶ್ಲೀಲ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎಂದು ದೂರಿದ್ದ ಸಂತ್ರಸ್ತೆ ಆಗಸ್ಟ್ 28ಕ್ಕೆ ಆತ್ಮಹತ್ಯೆಗೆ ಶರಣಾದರು’ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದರು.
ಆದರೆ ಪೊಲೀಸರು ದೂರಿಗೆ ಸಂಬಂಧಿಸಿದಂತೆ ಯಾವುದೇ ಕ್ರಮಕೈಗೊಂಡಿಲ್ಲ ಎಂದುಆತ್ಮಹತ್ಯೆಗೂ ಮುನ್ನ ಸಂತ್ರಸ್ತೆ ಆರೋಪಿಸಿದ್ದರು.
‘ದಂಪತಿ ನಾಲ್ಕು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ 18 ತಿಂಗಳ ಮಗನಿದ್ದಾನೆ’ ಎಂದು ಎಸ್‌ಎಚ್‌ಒ ಸ್ಥಾನದ್ದಲ್ಲಿದ್ದ ದೀಪಕ್ ಹೇಳಿದ್ದರು.
‘ತನ್ನ ಗಂಡ ತ್ರಿವಾಳಿ ತಲಾಖ್ ಮೂಲಕ ವಿಚ್ಛೇದನ ನೀಡಿ, ಮಗುವನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾನೆ’ ಎಂದು ಆಗಸ್ಟ್ 18ರಂದು ನೀಡಲಾದ ದೂರಿನಲ್ಲಿ ಸಂತ್ರಸ್ತೆಯು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.