ಪಟ್ನಾ: ಬಿಹಾರದ ಸಹರ್ಸಾ ಜಿಲ್ಲೆಯ ಪಂಚಾಯಿತಿಯು ಅತ್ಯಾಚಾರ ಸಂತ್ರಸ್ತೆಗೆ ₹ 70,000 ಪರಿಹಾರ ನೀಡುವಂತೆ ಆರೋಪಿಗೆ ಸೂಚಿಸುವ ಮೂಲಕ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿರುವ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಆರೋಪಿಯನ್ನು ಸರ್ಫರಾಜ್ ಎಂದು ಗುರುತಿಸಲಾಗಿದ್ದು, ಶನಿವಾರ ಮಧ್ಯಾಹ್ನ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬಸ್ನಾಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯು 15 ದಿನಗಳ ಹಿಂದೆ ದಲಿತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಆರೋಪಿಯು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರ ಮೇಲೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
'ಆರೋಪಿ ಮತ್ತು ಆತನ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಗ್ರಾಮದಲ್ಲಿ ಒಂದು ವಾರದ ಹಿಂದೆ ಪಂಚಾಯಿತಿ ಸೇರಲಾಗಿತ್ತು. ಈ ವೇಳೆ ಪಂಚಾಯಿತಿ ಮುಖ್ಯಸ್ಥರು ಆರೋಪಿಯು ದಂಡವಾಗಿ ಸಂತ್ರಸ್ತೆಗೆ 70 ಸಾವಿರ ನೀಡುವಂತೆ ನಿರ್ದೇಶಿಸಿದ್ದರು' ಎಂದು ತನಿಖಾಧಿಕಾರಿ ಜೆಪಿ ಸಿಂಗ್ ತಿಳಿಸಿದ್ದಾರೆ.
ಈ ಬೆಳವಣಿಗೆ ಸಾಮಾಜಿಕ ಸಂಘಟನೆಯೊಂದರ ಗಮನಕ್ಕೆ ಬಂದಿದೆ. ಬಳಿಕ ಸಂತ್ರಸ್ತೆಯ ಹೇಳಿಕೆ ಪಡೆದು, ಬಸ್ನಾಹಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ.
ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ್ದೇವೆ. ಆತ ತಪ್ಪೊಪ್ಪಿಕೊಂಡಿದ್ದಾನೆ. ತಾನು ಮತ್ತು ತನ್ನ ಕುಟುಂಬ ಸದಸ್ಯರು ರಾಜಿ ಮಾಡಿಕೊಳ್ಳುವಂತೆ ಸಂತ್ರಸ್ತೆಯ ಮೇಲೆ ಒತ್ತಡ ಹೇರಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.