ADVERTISEMENT

ದೇಶದ್ರೋಹ: ಕಾನೂನು ಆಯೋಗದ ಶಿಫಾರಸುಗಳಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 17:00 IST
Last Updated 3 ಜೂನ್ 2023, 17:00 IST
 ಶಶಿ ತರೂರ್
 ಶಶಿ ತರೂರ್   

ನವದೆಹಲಿ: ದೇಶದ್ರೋಹ ಪ್ರಕರಣಗಳಲ್ಲಿ ವಿಧಿಸುವ ಜೈಲುಶಿಕ್ಷೆ ಅವಧಿಯನ್ನು ಕನಿಷ್ಠ ಮೂರು ವರ್ಷಗಳಿಂದ ಏಳು ವರ್ಷಗಳವರೆಗೆ ಹೆಚ್ಚಿಸಬೇಕು ಎಂದು ಕಾನೂನು ಆಯೋಗ ಮಾಡಿರುವ ಶಿಫಾರಸಿಗೆ ಕಾಂಗ್ರೆಸ್‌ನ ಸಂಸದರಾದ ಶಶಿ ತರೂರ್‌, ಪಿ. ಚಿದಂಬರಂ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಶನಿವಾರ ವಿರೋಧ ವ್ಯಕ್ತಪಡಿಸಿದ್ದಾರೆ.

‘ಇದು ಆಘಾತಕಾರಿ ಮತ್ತು ಈ ಕಾನೂನು ಈಗಾಗಲೇ ಸಾಕಷ್ಟು ದುರುಪಯೋಗ ಆಗಿರುವುದರಿಂದ ಇದನ್ನು ವಿರೋಧಿಸಬೇಕು’ ಎಂದು ತರೂರ್‌ ಹೇಳಿದ್ದಾರೆ.

‘ದೇಶದ್ರೋಹ ಕಾನೂನನ್ನು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಬೇಕೆಂದು 2014ರಲ್ಲಿ ನಾನು ಮಂಡಿಸಿದ ಖಾಸಗಿ ಮಸೂದೆಯಲ್ಲಿ ಮತ್ತು ಕಾಂಗ್ರೆಸ್‌ನ 2019ರ ಪ್ರಣಾಳಿಕೆಯಲ್ಲಿ ಒತ್ತಾಯಿಸಲಾಗಿತ್ತು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಭಾರತೀಯ ದಂಡ ಸಂಹಿತೆಯ(ಐಪಿಸಿ) 124 (ಎ)(ದೇಶದ್ರೋಹ) ಸೆಕ್ಷನ್‌ ಅನ್ನು ಏಕೆ ಕೈಬಿಡಬಾರದು ಎಂದು 2022ರಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.

‘ರೋಗಕ್ಕಿಂತ ಕೆಟ್ಟ ಚಿಕಿತ್ಸೆ ಸೂಚಿಸಿದಂತೆ’: ಕಾನೂನು ಆಯೋಗದ ಶಿಫಾರಸಿನ ಕುರಿತು ಪ್ರತಿಕ್ರಿಯಿಸಿರುವ ಪಿ. ಚಿದಂಬರಂ, ‘ಇದು ವೈದ್ಯರು, ರೋಗಕ್ಕಿಂತ ಕೆಟ್ಟ ಚಿಕಿತ್ಸೆಯನ್ನು ಸೂಚಿಸಿದಂತಾಗಿದೆ’ ಎಂದು ಬಣ್ಣಿಸಿದ್ದಾರೆ.

‘ಈ ಕಠೋರ ಕಾನೂನು, ಆಡಳಿತಗಾರರಿಗೆ ದುರುಪಯೋಗ ಮಾಡಲು ಆಹ್ವಾನ ನೀಡಿದಂತಾಗಿದೆ. ಈ ಹಿಂದೆಯೂ ಅದು ಸಾಬೀತಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಗಣರಾಜ್ಯದ ತತ್ವಗಳಿಗೆ ವಿರುದ್ಧ’: ಕಾನೂನು ಆಯೋಗದ ಶಿಫಾರಸು ದೇಶದ ಗಣರಾಜ್ಯದ ಅಡಿಪಾಯಕ್ಕೆ ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಶಿಫಾರಸಿನಿಂದ ನಾನು ವ್ಯಾಕುಲನಾಗಿದ್ದೇನೆ. ಯಾರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೋ ಅವರ ಬಾಯಿ ಮುಚ್ಚಿಸಲು ನೀವು ಬಯಸುತ್ತೀರಿ’ ಎಂದೂ ಸಿಬಲ್ ಹೇಳಿದ್ದಾರೆ.

ಇದು ದೋಷಪೂರಿತ ಕಾನೂನು ಎಂದಿರುವ ಅವರು, 2014ರ ಬಳಿಕ ದಾಖಲಾಗಿದ್ದ 10 ಸಾವಿರಕ್ಕೂ ಹೆಚ್ಚು ದೇಶದ್ರೋಹ ಪ್ರಕರಣಗಳಲ್ಲಿ ಕೇವಲ 329 ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.