ADVERTISEMENT

ನಮ್ಮ ಕ್ಷಿಪಣಿಯಿಂದಲೇ ನಮ್ಮ ಹೆಲಿಕಾಪ್ಟರ್ ಧ್ವಂಸ: ವಾಯುಪಡೆಯ ನೂತನ ಮುಖ್ಯಸ್ಥ

ಎಂಐ–17 ಚಾಪರ್ ಹೊಡೆದುರುಳಿಸಿದ್ದ ವಾಯುಪಡೆ

ಪಿಟಿಐ
Published 4 ಅಕ್ಟೋಬರ್ 2019, 19:30 IST
Last Updated 4 ಅಕ್ಟೋಬರ್ 2019, 19:30 IST
ಎಂಐ–17 ಹೆಲಿಕಾಪ್ಟರ್‌ನ ಅವಶೇಷ
ಎಂಐ–17 ಹೆಲಿಕಾಪ್ಟರ್‌ನ ಅವಶೇಷ   

ನವದೆಹಲಿ:‘ಜಮ್ಮು ಮತ್ತು ಕಾಶ್ಮೀರದಲ್ಲಿ ಫೆಬ್ರುವರಿಯಲ್ಲಿ ವಾಯುಪಡೆಯ ಎಂಐ–17 ಹೆಲಿಕಾಪ್ಟರ್‌ಗೆ ಅಪ್ಪಳಿಸಿದ್ದು, ನಮ್ಮದೇ ವಾಯುಪಡೆಯ ಕ್ಷಿಪಣಿ ಎಂಬುದು ತನಿಖೆಯಿಂದ ದೃಢಪಟ್ಟಿದೆ’ ಎಂದು ವಾಯುಪಡೆಯ ನೂತನ ಮುಖ್ಯಸ್ಥ ರಾಕೇಶ್ ಕುಮಾರ್‌ ಸಿಂಗ್ ಬಧೌರಿಯಾ ಹೇಳಿದ್ದಾರೆ.

ಈ ಅಚಾತುರ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಉಗ್ರರ ನೆಲೆ ಮೇಲೆ ವಾಯುಪಡೆಯ ವಿಮಾನಗಳು ದಾಳಿ ನಡೆಸಿದ ಮರುದಿನ ಈ ಅವಘಡ ನಡೆದಿತ್ತು. ಈ ದಾಳಿಯ ಮರುದಿನ ಭಾರತ ಮತ್ತು ಪಾಕಿಸ್ತಾನದ ಯುದ್ಧ ವಿಮಾನಗಳು ಪರಸ್ಪರ ಕಾದಾಟದಲ್ಲಿದ್ದವು. ಇದೇ ವೇಳೆ ಬೇರೊಂದು ಕಾರ್ಯಾಚರಣೆಯಲ್ಲಿ ಇದ್ದ ಎಂಐ–17 ಹೆಲಿಕಾಪ್ಟರ್‌ ಅನ್ನು ಹೊಡೆದು ಉರುಳಿಸಲಾಗಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ಆರು ಸಿಬ್ಬಂದಿ ಹಾಗೂ ಹೆಲಿಕಾಪ್ಟರ್‌ ಅಪ್ಪಳಿಸಿದ ಕಾರಣ ನಾಗರಿಕರೊಬ್ಬರು ಮೃತಪಟ್ಟಿದ್ದರು.

ADVERTISEMENT

ಹೆಲಿಕಾಪ್ಟರ್‌ಗೆ ಅಪ್ಪಳಿಸಿದ್ದು ಭಾರತೀಯ ವಾಯಪಡೆಯ ಕ್ಷಿಪಣಿ ಎಂಬುದು ದೃಢಪಟ್ಟಿತ್ತು. ಆದರೆ ಈ ಅಚಾತುರ್ಯ ಹೇಗಾಯಿತು ಎಂಬುದರ ಬಗ್ಗೆ ವಾಯುಪಡೆಯು ಉನ್ನತಮಟ್ಟದ ಆಂತರಿಕ ತನಿಖೆಗೆ ಆದೇಶಿಸಿತ್ತು. ತನಿಖೆಯು ಆಗಸ್ಟ್‌ ಅಂತ್ಯದ ವೇಳೆಗೆ ಪೂರ್ಣಗೊಂಡಿತ್ತು.

ವರದಿಯ ಪ್ರಧಾನ ಅಂಶವನ್ನು ರಾಕೇಶ್ ಕುಮಾರ್ ಅವರು ಶುಕ್ರವಾರ ಬೆಳಿಗ್ಗೆ ಟ್ವೀಟ್‌ ಮಾಡಿದ್ದರು. ನಂತರ ಮಾಧ್ಯಮಗೋಷ್ಠಿಯಲ್ಲಿ ಇದೇ ವಿಚಾರವನ್ನು ವಿವರಿಸಿದರು.

*ನಮ್ಮ ಹೆಲಿಕಾಪ್ಟರ್‌ ಅನ್ನು ನಮ್ಮ ಕ್ಷಿಪಣಿಯೇ ಹೊಡೆದು ಉರುಳಿಸಿದ್ದು ಅತ್ಯಂತ ದೊಡ್ಡ ಪ್ರಮಾದ. ಇಂತಹ ಪ್ರಮಾದ ಮತ್ತೆ ಆಗದಂತೆ ಎಚ್ಚರವಹಿಸುತ್ತೇವೆ

ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ, ವಾಯುಪಡೆ ಮುಖ್ಯಸ್ಥ

ಸಂವಹನ ಸಮಸ್ಯೆ

ವಾಯುಪಡೆಯ ಯುದ್ಧವಿಮಾನಗಳು, ಕದನ ಹೆಲಿಕಾಪ್ಟರ್‌ಗಳು ಮತ್ತು ಬಹುಪಯೋಗಿ ಹೆಲಿಕಾಪ್ಟರ್‌ಗಳಲ್ಲಿ ‘ಐಡೆಂಟಿಫಿಕೇಷನ್ ಆಫ್ ಫ್ರೆಂಡ್‌ ಆರ್‌ ಫೋ–ಐಎಫ್ಎಫ್‌’ ಎಂಬ ವ್ಯವಸ್ಥೆ ಇರುತ್ತದೆ. ಎಂಐ–17 ಹೆಲಿಕಾಪ್ಟರ್‌ನಲ್ಲಿ ಇದ್ದ ಐಎಫ್‌ಎಫ್ ಸಾಧನವನ್ನು ಚಾಲೂ ಮಾಡಿರಲಿಲ್ಲ. ಹೀಗಾಗಿ ಅದು ನಮ್ಮ ವಾಯುಪಡೆಯದ್ದೇ ಅಥವಾ ಎದುರಾಳಿ ವಾಯುಪಡೆಯದ್ದೇ ಎಂಬುದು ದೃಢಪಟ್ಟಿರಲಿಲ್ಲ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಹೆಲಿಕಾಪ್ಟರ್ ಸಿಬ್ಬಂದಿ ಮತ್ತು ಕ್ಷಿಪಣಿ ಉಡಾವಣೆ ಸಿಬ್ಬಂದಿ ನಡುವೆ ಗೊಂದಲ ಏರ್ಪಟ್ಟಿದೆ. ಹೀಗಾಗಿ ಕ್ಷಿಪಣಿ ಉಡಾಯಿಸಿ, ಹೆಲಿಕಾಪ್ಟರ್‌ ಅನ್ನು ಹೊಡೆದು ಉರುಳಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅವಘಡ ನಡೆದ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ವಾಯುಪಡೆಯ ಯುದ್ಧವಿಮಾನಗಳು ಕಾರ್ಯಾಚರಣೆಯಲ್ಲಿದ್ದವು. ಸಂವಹನ ವಿಫಲವಾಗಲು ಇದೂ ಒಂದು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.