ADVERTISEMENT

ಶೋಪಿಯಾನ್ ನಕಲಿ ಎನ್‌ಕೌಂಟರ್‌: ಅಧಿಕಾರ ಉಲ್ಲಂಘನೆ ಬಗ್ಗೆ ಒಪ್ಪಿಕೊಂಡ ಸೇನೆ

ಮೇಲ್ನೋಟಕ್ಕೆ ಸಿಬ್ಬಂದಿ ಅಧಿಕಾರ ಉಲ್ಲಂಘಿಸಿದ್ದಾರೆ ಎಂದು ಒಪ್ಪಿದ ಸೇನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:54 IST
Last Updated 18 ಸೆಪ್ಟೆಂಬರ್ 2020, 14:54 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಶ್ರೀನಗರ:ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಜುಲೈ 18ರಂದು ನಡೆದಿದ್ದ ‘ನಕಲಿ’ ಎನ್‌ಕೌಂಟರ್‌ ವೇಳೆ ಯೋಧರುಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಎಎಫ್‌ಎಸ್‌ಪಿಎ)ಉಲ್ಲಂಘಿಸಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯ ದೊರೆತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿತ ಸಿಬ್ಬಂದಿ ವಿರುದ್ಧ ಸೇನಾ ಕಾಯ್ದೆಯಡಿ ಶಿಸ್ತುಕ್ರಮ ಕೈಗೊಳ್ಳಲು ಸೇನೆಯು ಪ್ರಕ್ರಿಯೆ ಆರಂಭಿಸಿದೆ. ಶೋಪಿಯಾನ್ನಲ್ಲಿ ನಡೆದ ‘ಆಪರೇಷನ್‌ ಅಮ್ಶಿಪೊರಾ’ ಕುರಿತು ತನಿಖೆಗೆ ಸೇನೆ ಆದೇಶಿಸಿತ್ತು. ಈ ಎನ್‌ಕೌಂಟರ್‌ನಲ್ಲಿ ಮೂವರು ಅಪರಿಚಿತ ಶಂಕಿತ ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿತ್ತು.

‘ಕಾರ್ಯಾಚರಣೆ ವೇಳೆ, ಎಫ್‌ಎಸ್‌ಪಿಎ 1990ರಡಿ ನೀಡಲಾಗಿದ್ದ ಅಧಿಕಾರವನ್ನು ಮೀರಲಾಗಿತ್ತು ಎನ್ನುವುದಕ್ಕೆ ಕೆಲ ಪ್ರಾಥಮಿಕ ಸಾಕ್ಷ್ಯಗಳು ತನಿಖೆ ವೇಳೆ ಪತ್ತೆಯಾಗಿವೆ’ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದರು.

ADVERTISEMENT

ಜೊತೆಗೆ, ಹತ್ಯೆಯಾದ ಮೂವರು ರಜೌರಿ ಜಿಲ್ಲೆಯ ಇಮ್ತಿಯಾಜ್, ಅಬ್ರಾರ್‌ ಹಾಗೂ ಇಬ್ರಾರ್‌ ಎಂಬುದನ್ನು ಸೇನೆ ಒಪ್ಪಿದೆ. ‘ಅವರ ಡಿಎನ್‌ಎ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ. ಇವರು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರೇ ಎನ್ನುವುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಕಾಲಿಯಾ ತಿಳಿಸಿದರು.

ಪ್ರಕರಣವೇನು?:ಶೋಪಿಯಾನ್‌ನಲ್ಲಿ ನಡೆದ‌ ಎನ್‌ಕೌಂಟರ್ ಬಳಿಕ, ಶೋಪಿಯಾನ್ನ ಸೇಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಕುಟುಂಬದ ಸದಸ್ಯರು ಕಾಣೆಯಾಗಿದ್ದಾರೆ ಎಂದು, ರಜೌರಿಯಲ್ಲಿ ಮೂರು ಕುಟುಂಬಗಳು ಪೊಲೀಸರಿಗೆ‌ ದೂರು ನೀಡಿದ್ದವು.

ಅಬ್ರಾರ್‌ ಅಹ್ಮದ್‌ ಖಾನ್ ‌(18), ಇಮ್ತಿಯಾಜ್‌ ಹುಸೈನ್ ‌(26) ಹಾಗೂ ಮೊಹಮ್ಮದ್‌ ಇಬ್ರಾರ್‌ (21) ಕಾಣಿಯಾದವರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ನಂತರದಲ್ಲಿ ಈ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.ಅಪರಿಚಿತ ಉಗ್ರರ ಡಿಎನ್‌ಎ ಜೊತೆ ಹೋಲಿಸಲು, ಕುಟುಂಬ ಸದಸ್ಯರ ಡಿಎನ್‌ಎ ಮಾದರಿಯನ್ನು ಆ.13ರಂದು ಪಡೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.