ಮಹಾರಾಷ್ಟ್ರ: ಕೇಂದ್ರದ ನೀತಿ ವಿರೋಧಿಸಿ ಮಹಾರಾಷ್ಟ್ರದಲ್ಲಿ ಹಲವು ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂದರ್ಭದಲ್ಲಿ ಬಾಗಿಲು ಮುಚ್ಚಿಸಲು ಬಂದ ಪ್ರತಿಭಟನಾಕಾರರ ಕಣ್ಣಿಗೆ ಅಂಗಡಿ ಮಾಲೀಕ ಖಾರದ ಪುಡಿ ಎರಚಿರುವ ಘಟನೆ ಬುಧವಾರ ನಡೆದಿದೆ.
ಪುರ ಸಮೀಪದ ಯವತಮಲ್ ಎಂಬಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ನೀತಿಗಳನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಈ ಸಂದರ್ಭದಲ್ಲಿ ಕೆಲವು ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಕೆಲವರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. ಇದು ಸಂಘಟನೆಗಳ ಕಾರ್ಯಕರ್ತರ ಕಣ್ಣಿಗೆ ಬಿದ್ದಿತು. ಕೂಡಲೆ ಅವರು ಅಂಗಡಿ ಮಾಲೀಕರ ಬಳಿ ಹೋಗಿ ಬಾಗಿಲು ಮುಚ್ಚುವಂತೆ ಹೇಳಿದರು. ಆದರೆ, ಮಾಲೀಕ ಬಾಗಿಲು ಮುಚ್ಚಲಿಲ್ಲ. ಆ ಸಮಯದಲ್ಲಿ ಕಾರ್ಯಕರ್ತರು ಹಾಗೂ ಅಂಗಡಿ ಮಾಲೀಕನ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಕೈಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಅಂಗಡಿ ಮಾಲೀಕ ಎದುರು ಮಾತನಾಡದೆ ಪ್ರತಿಭಟನಾಕಾರರತ್ತ ಖಾರದ ಪುಡಿ ಎರಚಿದ್ದಾನೆ. ಇದರಿಂದ ವಿಚಲಿತರಾದ ಪ್ರತಿಭಟನಾಕಾರರು ಕಣ್ಣು ಉರಿಯುತ್ತಿರುವುದನ್ನು ತಡೆಕೊಳ್ಳಲಾಗದೆ ಸ್ಥಳದಿಂದ ತೆರಳಿದ್ದಾರೆ. ಉಳಿದ ಕಾರ್ಯಕರ್ತರು ಅಂಗಡಿ ಮಾಲೀಕನ ಈ ಕೆಲಸಕ್ಕೆ ಇತರೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.