ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ಶ್ರೀ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನದಂದು ದೆಹಲಿಯ ಪ್ರಖ್ಯಾತ ಮಾರುಕಟ್ಟೆ 'ಕನ್ನೌತ್ ಪ್ಲೇಸ್'ನಲ್ಲಿ 1.25 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗುವುದು ಎಂದು ನವದೆಹಲಿ ವರ್ತಕರ ಸಂಘ (ಎನ್‌ಡಿಟಿಎ) ಶುಕ್ರವಾರ ತಿಳಿಸಿದೆ.
ಪ್ರಾಣ ಪ್ರತಿಷ್ಠಾಪನೆ ದಿನದಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಡೀ ಮಾರುಕಟ್ಟೆ ಪ್ರದೇಶ ಶ್ರೀರಾಮನ ಚಿತ್ರವನ್ನೊಳಗೊಂಡ ಕೇಸರಿ ಧ್ವಜದಿಂದ ಸಿಂಗಾರಗೊಳ್ಳಲಿದೆ ಎಂದು ಎನ್‌ಡಿಟಿಎ ಜಂಟಿ ಕಾರ್ಯದರ್ಶಿ ಅಮಿತ್ ಗುಪ್ತಾ ಹೇಳಿದ್ದಾರೆ.
ಜನವರಿ 22ರಂದು ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಮಾರುಕಟ್ಟೆಯ ವೃತ್ತದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುತ್ತದೆ. ಸಸ್ಯಾಹಾರಿ ಆಹಾರವನ್ನಷ್ಟೇ ತಯಾರಿಸಲು ಇಲ್ಲಿನ ಹಲವು ರೆಸ್ಟೋರೆಂಟ್‌ಗಳು ತೀರ್ಮಾನಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯ ವರ್ತಕರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ. ಗಂಟೆ ಬಾರಿಸಿ, ಶಂಖನಾದ ಮೊಳಗಿಸಲಿದ್ದಾರೆ. ವರ್ತಕರು, ಗ್ರಾಹಕರು ಸೇರಿದಂತೆ ಸಂಜೆ ವೇಳೆಗೆ ಮಾರುಕಟ್ಟೆಯಲ್ಲಿ ಇರುವವರು ರಾಮನ ಹೆಸರಿನಲ್ಲಿ ಹಣತೆ ಬೆಳಗಿಸಲಿದ್ದಾರೆ ಎಂದೂ ಗುಪ್ತಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.