ADVERTISEMENT

30,000 ಅಡಿ ಎತ್ತರದಲ್ಲಿ ರಫೇಲ್‌ ವಿಮಾನಗಳಿಗೆ ಇಂಧನ ತುಂಬಿದ ಮನಮೋಹಕ ದೃಶ್ಯ

ಏಜೆನ್ಸೀಸ್
Published 28 ಜುಲೈ 2020, 15:52 IST
Last Updated 28 ಜುಲೈ 2020, 15:52 IST
ಇಂಧನ ತುಂಬುವ ಚಿತ್ರ
ಇಂಧನ ತುಂಬುವ ಚಿತ್ರ   

ನವದೆಹಲಿ: ಭಾರತದ ವಾಯುಪಡೆಯ ಸಾಮರ್ಥ್ಯವನ್ನು ಬಲಪಡಿಸಲಿರುವ ರಫೇಲ್ ಯುದ್ಧ ವಿಮಾನಗಳ ಮೊದಲ ತಂಡ ಫ್ರಾನ್ಸ್‌ನಿಂದ ಸೋಮವಾರ ಹೊರಟಿದ್ದು ಬುಧವಾರ ಭಾರತಕ್ಕೆ ಬರಲಿವೆ.

ಇಲ್ಲಿನ ಅಂಬಾಲದಲ್ಲಿರುವ ವಾಯುನೆಲೆಗೆ 3 ಸಿಂಗಲ್‌ ಸೀಟರ್‌ ಹಾಗೂ 2 ಡಬ್ಬಲ್‌ ಸೀಟರ್‌ ರಫೇಲ್ ಯುದ್ಧ ವಿಮಾನಗಳುಬಂದಿಳಿಯಲಿವೆ.

ಬರುವ ಮಾರ್ಗ ಮಧ್ಯೆ 30,000 ಅಡಿ ಎತ್ತರದಲ್ಲಿ ರಫೇಲ್‌ ಯುದ್ಧ ವಿಮಾನಗಳು ಫ್ರಾನ್ಸ್‌ ವಾಯುಪಡೆಯ ವಿಮಾನದಿಂದ ಇಂಧನವನ್ನು ಭರ್ತಿ ಮಾಡಿಕೊಂಡಿವೆ. ಈ ಚಿತ್ರಗಳನ್ನು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಟ್ವೀಟ್‌ ಮಾಡಿದೆ. ನಮ್ಮ ರಫೇಲ್‌ ವಿಮಾನಗಳ ಪ್ರಯಾಣಕ್ಕಾಗಿ ಫ್ರಾನ್ಸ್‌ ವಾಯುಪಡೆ ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

ADVERTISEMENT

ಫ್ರಾನ್ಸ್‌ ವಾಯುಪಡೆಯು‘ಏರ್‌ಬಸ್‌ ಎ330’ಬಹು ಉಪಯೋಗಿ ವಿಮಾನ ಟ್ಯಾಂಕರ್‌ ಮೂಲಕ ಭಾರತದ ವಿಮಾನಗಳಿಗೆ ಇಂಧನವನ್ನು ಭರ್ತಿ ಮಾಡಲಾಯಿತು. ಭಾರತೀಯ ವಾಯುಪಡೆ ಒದಗಿಸಿದ್ದ ರಷ್ಯಾ ತಂತ್ರಜ್ಞಾನದ ಇಂಧನ ಪೂರೈಕೆ ಸಾಧನಗಳನ್ನು ಬಳಸಿ ಆಗಸದಲ್ಲಿ ಇಂಧನ ಭರ್ತಿ ಮಾಡಲಾಯಿತು.

ಈ ಯುದ್ಧ ವಿಮಾನಗಳನ್ನು ಚಾಲನೆ ಮಾಡಲು ಪೈಲಟ್‌ಗಳಿಗೆ ಫ್ರಾನ್ಸ್‌ನಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಇನ್ನು ಕೆಲ ಪೈಲಟ್‌ಗಳು ಫ್ರಾನ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಈ ಬಲಿಷ್ಠ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾಗುತ್ತಿರುವುದು ದೇಶದ ಸಾಮರ್ಥ್ಯಕ್ಕೆ ಬಲ ತುಂಬಿದೆ ಎಂದು ವಾಯುಪಡೆ ಹೇಳಿದೆ.

36 ವಿಮಾನಗಳ ಪೈಕಿ ಐದು ವಿಮಾನಗಳು ಫ್ರಾನ್ಸ್‌ನ ಅಲ್‌ ಧಾಪ್ರಾದಿಂದ ಭಾರತದ ಅಂಬಾಲದಲ್ಲಿರುವ ವಾಯುನೆಲೆಗೆ ಬಂದಿಳಿಯಲಿವೆ. 7,000 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಆಗಸದಲ್ಲೇ ವಿಮಾನಗಳಿಗೆ ಇಂಧನವನ್ನು ಭರ್ತಿ ಮಾಡಲಾಗಿದೆ.

ಯುದ್ಧವಿಮಾನ ಖರೀದಿಗೆ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ತಂಡದಲ್ಲಿ ಐದು ವಿಮಾನಗಳು ಭಾರತಕ್ಕೆ ಬರುತ್ತಿವೆ. ಇನ್ನು ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ.

ಲಡಾಖ್‌ನಲ್ಲಿ ಭಾರತ–ಚೀನಾ ನಡುವೆ ಗಡಿ ಸಮಸ್ಯೆ ಉಂಟಾಗಿರುವ ಸಮಯದಲ್ಲೇ, ಬಲಿಷ್ಠ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾಗುತ್ತಿರುವುದು ದೇಶದ ಸಾಮರ್ಥ್ಯಕ್ಕೆ ಬಲ ತುಂಬಿದೆ. ಆಗಸ್ಟ್ ಮಧ್ಯಭಾಗದಲ್ಲಿ ವಿಮಾನಗಳ ಔಪಚಾರಿಕ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ವಾಯುಪಡೆ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.