ನವದೆಹಲಿ: ಬಿಜೆಪಿಯಲ್ಲಿ ನಮ್ಮ ತಂದೆಯ ಅರ್ಹತೆಗೆ ತಕ್ಕಂತಹ ಗೌರವ, ಮರ್ಯಾದೆಗಳು ಸಿಗುತ್ತಿರಲಿಲ್ಲ. ಅವರು ಬಹಳ ಹಿಂದೆಯೇ ಬಿಜೆಪಿಯನ್ನು ಬಿಡಬೇಕಾಗಿತ್ತು ಎಂದು ಖ್ಯಾತ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಕುರಿತು ತೀರ್ಮಾನ ಪ್ರಕಟಿಸಿದ ನಂತರ ತಂದೆಯನ್ನು ಬೆಂಬಲಿಸಿ ಮೊದಲಬಾರಿಗೆ ಸೋನಾಕ್ಷಿಸಿನ್ಹಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಗೌರವ ನೀಡುತ್ತಿಲ್ಲ. ಹೀಗೆ ಗೌರವ ವಂಚಿತರಾದವರಲ್ಲಿ ನನ್ನ ತಂದೆಯೂ ಒಬ್ಬರು’ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರ ಮಗಳು, ನಟಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.
‘ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರ ಕಾಲದಿಂದಲೂ ನಮ್ಮ ತಂದೆ ಪಕ್ಷದಲ್ಲಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಆರಂಭದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದ ಒಂದು ಗುಂಪಿನ ನಾಯಕರನ್ನು ಈಗಿನ ನಾಯಕರು ಕಡೆಗಣಿಸುತ್ತಿದ್ದಾರೆ. ಹಿರಿಯರಿಗೆ ನೀಡಬೇಕಾದ ಗೌರವ ನೀಡುತ್ತಿಲ್ಲ’ ಎಂದು ಸೋನಾಕ್ಷಿ ಬೇಸರ ವ್ಯಕ್ತಪಡಿಸಿದ್ದಾರೆ.
‘ನೀವು ಇರುವ ಜಾಗದಲ್ಲಿನ ಬೆಳವಣಿಗೆಗಳು ಸರಿಯಲ್ಲ ಎಂದು ನಿಮಗೆ ಗೊತ್ತಾದರೆ ಮತ್ತು ಅಲ್ಲಿ ನಿಮಗೆ ಗೌರವ ಸಿಗುತ್ತಿಲ್ಲ ಎಂದು ಅನಿಸಿದರೆ ಅಲ್ಲಿಂದ ಹೊರಬರುವುದು ಸೂಕ್ತ. ನನ್ನ ತಂದೆ ಬಹಳ ಹಿಂದೆಯೇ ಬಿಜೆಪಿಯನ್ನು ತೊರೆಯಬೇಕಿತ್ತು. ಆದರೆ ಅತ್ಯಂತ ಪ್ರಶಸ್ತವಾದ ಸಮಯದಲ್ಲೇ ನನ್ನ ತಂದೆ ಬಿಜೆಪಿ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಹಾಲಿ ಸಂಸದರೂ ಆಗಿರುವ ಶತ್ರುಘ್ನ ಸಿನ್ಹಾ ಗುರುವಾರ ನವದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರುವ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.
ಮೋದಿ ಜಾರಿಗೆ ತಂದ ನೋಟು ರದ್ದತಿ ಹಾಗೂ ಜಿಎಸ್ಟಿ ಕುರಿತು ತೀವ್ರ ಅಸಮಾಧಾನಗಳನ್ನು, ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಶತ್ರುಘ್ನ ಸಿನ್ಹಾ ಬಹಿರಂಗ ಸಮಾರಂಭ, ಸಾಮಾಜಿಕ ಜಾಲತಾಣಗಳಲ್ಲಿಸರ್ಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ನಡೆಯನ್ನು ಗಮನಿಸಿದ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿನ್ಹಾಗೆ ಟಿಕೆಟ್ ತಪ್ಪಿಸಿ ಅವರ ಕ್ಷೇತ್ರವಾದ ಬಿಹಾರದ ಪಾಟ್ನಾ ಸಾಹಿಬ್ಕ್ಷೇತ್ರಕ್ಕೆಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡುವ ಮೂಲಕ ಸಿನ್ಹಾರನ್ನು ಮೂಲೆಗುಂಪು ಮಾಡಿತು.ಶತ್ರುಘ್ನ ಸಿನ್ಹಾ ಅವರು ಪಾಟ್ನಾದ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಈ ಬಾರಿ ಟಿಕೆಟ್ ನೀಡದೆ ಪಕ್ಷ ತಮಗೆ ತೋರಿದ ಅಸಹಕಾರದಿಂದ ಬಿಜೆಪಿಯನ್ನು ತೊರೆಯಲು ನಿರ್ಧರಿಸಿದ ನಂತರ ಸಿನ್ಹಾ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದರು.'ಸದ್ಯಕಾಂಗ್ರೆಸ್ ಪಕ್ಷವನ್ನು ಶೀಘ್ರವೇ ಸೇರ್ಪಡೆಯಾಗಲಿದ್ದು, ಮೊದಲು ಕಾಂಗ್ರೆಸ್ ಸೇರುತ್ತೇನೆ, ನಂತರ ನವರಾತ್ರಿ ವೇಳೆಗೆ ಶುಭಸುದ್ದಿಯೊಂದನ್ನು ನೀಡುವುದಾಗಿ'ಶುತ್ರುಘ್ನ ಸಿನ್ಹಾಹೇಳಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಏಪ್ರಿಲ್ 6ಕ್ಕೆ ಸಿನ್ಹಾ ಕಾಂಗ್ರೆಸ್ ಸೇರಲು ದಿನಾಂಕ ನಿಗಧಿಯಾಗಿದೆ ಎನ್ನಲಾಗಿದೆ.
ಸಾಮಾಜಿಕ ತಾಣಗಳಲ್ಲಿ ಮತ್ತೆ ತಮ್ಮ ಟೀಕೆಗಳನ್ನು ಮುಂದುವರಿಸಿರುವ ಸಿನ್ಹಾ, ಬಿಜೆಪಿಯನ್ನು ಕಟ್ಟಿ ಬೆಳೆಸಿದ ಎಲ್ .ಕೆ.ಅಡ್ವಾಣಿ ಅವರನ್ನು ಬಿಜೆಪಿ ಕಣಕ್ಕಿಳಿಸದೆ ಅವರ ಕ್ಷೇತ್ರವಾದ ಗಾಂಧಿನಗರದಲ್ಲಿ ಅಮಿತ್ ಶಾ ಸ್ಪರ್ಧಿಸುವ ಮೂಲಕ ಅಡ್ವಾಣಿಯನ್ನುಮೂಲೆಗುಂಪು ಮಾಡಿದೆ ಎಂದಿದ್ದಾರೆ.
ಬಿಹಾರ40 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಈ ರಾಜ್ಯದಲ್ಲಿ ಬಿಜೆಪಿ ಜೆಡಿಯು ಹಾಗೂ ಲೋಕಜನಶಕ್ತಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತೊಂದು ರಾಜಕೀಯಪಕ್ಷ ರಾಷ್ಟ್ರೀಯ ಜನತಾದಳದ ಜೊತೆ ಮೈತ್ರಿ ಮಾಡಿಕೊಂಡು ಈ ಬಾರಿಯ ಲೋಕಸಭಾ ಚುನಾವಣೆ ಎದುರಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.