ನವದೆಹಲಿ: ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಆರೋಪಿ, ಮೃತಳ ಸಹ ಜೀವನ ಗೆಳೆಯನಾಗಿದ್ದ ಆಫ್ತಾಬ್ ಅಮಿನ್ ಪೂನಾವಾಲಾಗೆ ನಡೆಸಿರುವ ಮಂಪರು ಪರೀಕ್ಷೆಯ ವರದಿ ಪ್ರಸಾರ ಮಾಡದಂತೆ ಸ್ಥಳೀಯ ಕೋರ್ಟ್, ಆಜ್ ತಕ್ ಸುದ್ದಿವಾಹಿನಿಗೆ ನಿರ್ಬಂಧ ಹೇರಿದೆ.
ತನಿಖೆಗೆ ಸಂಬಂಧಿಸಿದ ಸೂಕ್ಷ್ಮವಾದ ಮಾಹಿತಿಗಳನ್ನು ಬಹಿರಂಗಪಡಿಸುವುದು ಆರೋಪಿಯ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂದು ಕೋರ್ಟ್ ಹೇಳಿದೆ. ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂವಿಧಾನದ 21ನೇ ವಿಧಿಯು ರಕ್ಷಣೆ ನೀಡಲಿದೆ. ಸಂಬಂಧಿತ ವ್ಯಕ್ತಿಯ ಮಾನಸಿಕ ಸ್ಥಿತಿ ರಕ್ಷಣೆಗೂ ಒತ್ತು ನೀಡಲಿದೆ ಎಂಬ ಅಂಶವನ್ನು ಕೋರ್ಟ್ ಉಲ್ಲೇಖಿಸಿದೆ.
‘ಕೊಲೆ ಪ್ರಕರಣದ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಖಂಡಿತವಾಗಿ ಆರೋಪಿ, ಆತನ ಕುಟುಂಬದವರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಲಿದೆ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ರಾಕೇಶ್ ಕುಮಾರ್ ಸಿಂಗ್ ಹೇಳಿದರು.
ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಟಿ.ವಿ. ಸುದ್ದಿವಾಹಿನಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮ್ ಸಿಂಗ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಶ್ರದ್ಧಾವಾಲ್ಕರ್ ಕೊಲೆ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದ ಕುರಿತು ಸಮಗ್ರ ವಿಚಾರಣೆ ನಡೆಸಲು ಕೋರ್ಟ್ ನಿರ್ಧರಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 17ಕ್ಕೆ ನಿಗದಿಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.