ನವದೆಹಲಿ: ಕಾಲ್ ಸೆಂಟರ್ ಉದ್ಯೋಗಿ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ಆರೋಪಿ ಆಫ್ತಾಬ್ ಅಮಿನ್ ಪೂನಾವಾಲ ವಿರುದ್ಧ ಮೇ 9ರಂದು ದೋಷಾರೋಪ ನಿಗದಿಪಡಿಸುವುದಾಗಿ ದೆಹಲಿಯ ನ್ಯಾಯಾಲಯವೊಂದು ಹೇಳಿದೆ.
ದೋಷಾರೋಪ ನಿಗದಿ ಕುರಿತು ಸರ್ಕಾರಿ ವಕೀಲರು ಮತ್ತು ಆರೋಪಿ ಪರ ವಕೀಲರ ವಾದಗಳನ್ನು ಆಲಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಮನೀಷಾ ಖುರಾನ ಕಕ್ಕಡ್ ಅವರು ಈ ಮೊಕದ್ದಮೆಯ ತೀರ್ಪು ಪ್ರಕಟಣೆಯನ್ನು ಶನಿವಾರಕ್ಕೆ ನಿಗದಿಪಡಿಸಿದ್ದರು. ಆದರೆ ಅವರು ರಜೆಯಲ್ಲಿ ಇರುವ ಕಾರಣ ದೋಷಾರೋಪ ನಿಗದಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಮೇ 9ಕ್ಕೆ ನಿಗದಿಪಡಿಸಿದ್ದಾರೆ.
ಇದೇವೇಳೆ, ಶ್ರದ್ಧಾ ಅವರ ಅಂತಿಮ ಸಂಸ್ಕಾರ ನೆರವೇರಿಸಲು ಅವರ ಕಳೇಬರವನ್ನು ಹಸ್ತಾಂತರಿಸುವಂತೆ ಕೋರಿ ಅವರ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯವು ಮೇ 9ಕ್ಕೆ ನಿಗದಿಪಡಿಸಿತು.
ಸಹಜೀವನ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದ ಆಫ್ತಾಬ್ ವಿರುದ್ಧ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 201 (ಅಪರಾಧದ ಸಾಕ್ಷ್ಯ ನಾಶ) ಅಡಿ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣ ಕುರಿತು 6,629 ಪುಟಗಳ ಆರೋಪಪಟ್ಟಿಯನ್ನು ಜನವರಿ 24ರಂದು ದೆಹಲಿ ಪೊಲೀಸರು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.