ನವದೆಹಲಿ: ಸಭಾಪತಿ ಜಗದೀಪ್ ಧನಕರ್ ಅವರು ರಾಜ್ಯಸಭೆ ಕಲಾಪಗಳನ್ನು ನಡೆಸುವ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಯಾವ ದೇಶದಲ್ಲಿಯೂ ಸದಸ್ಯರು ಮಾತನಾಡುವ ವೇಳೆ ಸಭಾಪತಿಯವರು ಪದೇಪದೇ ಅಡ್ಡಿಪಡಿಸುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು–ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ನಡೆದ ಉಗ್ರರ ದಾಳಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಸಂಸತ್‌ನಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿವೆ. ಸಾರ್ವಜನಿಕ ವಲಯದಲ್ಲಿರುವ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಿದಾಗ, ಅವುಗಳನ್ನು ದೃಢೀಕರಿಸುವಂತೆ ಸಭಾಪತಿ ಜಗದೀಪ್ ಧನಕರ್ ಅವರು ಸದಸ್ಯರಿಗೆ ಸೂಚಿಸುತ್ತಾರೆ. ಆದರೆ, ಸಾರ್ವಜನಿಕ ವಲಯದಲ್ಲಿರುವ ವಿಷಯಗಳಿಗೆ ದೃಢೀಕರಣದ ಅಗತ್ಯವಿಲ್ಲ. ಅಲ್ಲದೇ, ಯಾವ ಹೇಳಿಕೆಗಳೂ ದಾಖಲಾಗುವುದಿಲ್ಲ ಎಂದು ಅವರು ಹೇಳಿದಾಗ, ಮೈಕುಗಳು ಸ್ವಯಂಚಾಲಿತವಾಗಿ ಬಂದ್ ಆಗಿರುತ್ತವೆ’ ಎಂದು ಸಿಬಲ್ ಟೀಕಿಸಿದರು.
‘ಟಿ.ವಿ ವಾಹಿನಿಗಳಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನು ತೋರಿಸುವುದಿಲ್ಲ. ರಾಜ್ಯಸಭೆಯ ಮಾಜಿ ಸಭಾಪತಿ ಹಮೀದ್ ಅನ್ಸಾರಿ ಅವರ ಕಾರ್ಯವೈಖರಿ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದು ಸಹ ಸರಿಯಲ್ಲ’ ಎಂದರು.
‘ಪ್ರತಿಕ್ರಿಯೆ ನೀಡಲು ಸದನದಲ್ಲಿ ಹಾಜರಿರದ ವ್ಯಕ್ತಿ ವಿರುದ್ಧ ಆರೋಪಗಳನ್ನು ಮಾಡಬಾರದು. ಸಭಾಪತಿ ಸ್ಥಾನಕ್ಕೆ ಗೌರವ ಕೊಡುವುದು ಸಹ ಮುಖ್ಯ’ ಎಂದು ಹೇಳಿದರು.
ಹಮೀದ್ ಅನ್ಸಾರಿ ಅವರ ವಿರುದ್ಧ ಪ್ರಧಾನಿ ಮೋದಿ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಅವರು ಹಕ್ಕುಚ್ಯುತಿ ಮಂಡಿಸಿರುವ ಹಿನ್ನೆಲೆಯಲ್ಲಿ ಸಿಬಲ್ ಈ ಹೇಳಿಕೆ ನೀಡಿದ್ದಾರೆ.
ಜಮ್ಮು–ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿ ಪ್ರಸ್ತಾಪಿಸಿದ ಅವರು, ‘ಅಧಿಕ ಮುಖಬೆಲೆಯ ನೋಟುಗಳ ರದ್ದತಿ ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಹಾಗೂ ಭಯೋತ್ಪಾದನೆ ಕೊನೆಗೊಳ್ಳುವುದು ಎಂಬುದಾಗಿ ಪ್ರಧಾನಿ ಮೋದಿ 2016ರಲ್ಲಿ ಹೇಳಿದ್ದರು. ಆದರೂ, ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇವೆ’ ಎಂದು ಟೀಕಿಸಿದರು.
‘ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗಿದೆ. ಜಮ್ಮು–ಕಾಶ್ಮೀರ ಈಗ ಕೇಂದ್ರಾಡಳಿತ ಪ್ರದೇಶ; ಅಂದರೆ ಅದು ನೇರವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದಾಯಿತು. ಹಾಗಾದರೆ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.
ಸದನದಲ್ಲಿ ರಾಜಕೀಯ ಭಾಷಣಗಳನ್ನು ಮಾಡುವುದರಿಂದ ದೇಶದ ಪರಿಸ್ಥಿತಿ ಸುಧಾರಿಸುವುದಿಲ್ಲ-ಕಪಿಲ್ ಸಿಬಲ್, ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.