ಚಂಡಿಗಡ:ಪಕ್ಷಾಂತರದ ಪ್ರಯತ್ನ ನಡೆಸುತ್ತಿರುವುದಾಗಿ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ಮುಖಂಡ ನವಜೋತ್‌ಸಿಂಗ್ ಸಿಧು ಅವರು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಸವಾಲು ಹಾಕಿದ್ದಾರೆ.
ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿದ್ದನ್ನು ವಿರೋಧಿಸಿ 2015ರಲ್ಲಿ ಪಂಜಾಬ್‌ನ ಕೋಟಕ್‌ಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಂಜಾಬ್ ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಈ ತೀರ್ಪಿನ ನಂತರ ಸಿಧು ಅವರು ತಮ್ಮದೇ ಪಕ್ಷದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಬಹಿರಂಗವಾಗಿ ಟೀಕಾ ಪ್ರಹಾರಗಳನ್ನು ಮಾಡಿದ್ದಾರೆ. ಸಿಧು ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದ ಸಿಂಗ್, ‘ಸಿಧು ಅವರು ಸಂಪೂರ್ಣ ಅಶಿಸ್ತನ್ನು ಪ್ರದರ್ಶಿಸುತ್ತಿದ್ದಾರೆ, ಬಹುಶಃ ಅವರು ಆಮ್‌ಆದ್ಮಿ ಪಕ್ಷವನ್ನು ಸೇರುತ್ತಿರಬಹುದು’ ಎಂದಿದ್ದರು.
ಮುಖ್ಯಮಂತ್ರಿಯ ಈ ಹೇಳಿಕೆಗೆ ಟ್ವೀಟ್ ಮೂಲಕ ಶನಿವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಿಧು, ‘ಇಂದಿನವರೆಗೂ ನಾನು ಯಾರಲ್ಲೂ, ಯಾವ ಹುದ್ದೆಗಾಗಿಯೂ ಬೇಡಿಕೆ ಇಟ್ಟಿಲ್ಲ. ನಾನು ಕೇಳಿದ್ದು ಪಂಜಾಬ್‌ನ ಅಭಿವೃದ್ಧಿಯನ್ನು ಮಾತ್ರ. ಹಲವು ಬಾರಿ ನನ್ನನ್ನು ಆಹ್ವಾನಿಸಿ ಕ್ಯಾಬಿನೆಟ್ ಪದವಿಯ ಭರವಸೆ ನೀಡಲಾಗಿತ್ತು. ಆದರೆ, ನಾನು ಅದನ್ನು ಸ್ವೀಕರಿಸಲಿಲ್ಲ. ಈಗ ನಮ್ಮ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ನಾನು ಕಾದು ನೋಡುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.