ನವದೆಹಲಿ: ಪಂಜಾಬ್‌ನಲ್ಲಿ ಎಎಪಿ (ಆಮ್ ಆದ್ಮಿ ಪಕ್ಷ) ಸರ್ಕಾರ ರಚನೆಯಾದ ಬಳಿಕ ಕೃಷಿ ತ್ಯಾಜ್ಯಗಳನ್ನು ಸುಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಪಕ್ಷ ಪ್ರತಿಪಾದಿಸಿದೆ.
ಸುಗ್ಗಿಯ ನಂತರ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ನಡುವೆ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವುದು (ಭತ್ತದ ಕೂಳೆ ಸುಡುವುದು) ಸಾಮಾನ್ಯವಾಗಿದ್ದು, ದೆಹಲಿ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ಮಾಲಿನ್ಯ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ದೆಹಲಿ ಮತ್ತು ಪಂಜಾಬ್‌ನ ಎಎಪಿ ಸರ್ಕಾರಗಳು ತೀವ್ರ ಟೀಕೆ ಎದುರಿಸುತ್ತಿವೆ.
ಈ ಕುರಿತು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಶಾಸಕ ದಿಲೀಪ್ ಪಾಂಡೆ, ‘ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನೇತೃತ್ವದ ಸರ್ಕಾರದ ಅವಿರತ ಶ್ರಮದಿಂದಾಗಿ, ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯಗಳ ಸುಡುವಿಕೆ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ’ ಎಂದು ಹೇಳಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಅಂಕಿ ಅಂಶಗಳನ್ನು ಉಲ್ಲೇಖಿಸಿದ ಪಾಂಡೆ, ‘ಪಂಜಾಬ್‌ನಲ್ಲಿ 2022ರ ಅಕ್ಟೋಬರ್‌ನಲ್ಲಿ 8,000 ಇದ್ದ ಕೃಷಿ ತ್ಯಾಜ್ಯ ಸುಡುವಿಕೆ ಪ್ರಕರಣಗಳ ಸಂಖ್ಯೆ ಈಗ 1,866ಕ್ಕೆ ಇಳಿಕೆಯಾಗಿದೆ’ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿನ ಈ ಸಮಸ್ಯೆಯನ್ನು ಪರಿಹರಿಸಲು ಪಂಜಾಬ್‌ನ ಎಎಪಿ ಸರ್ಕಾರ ಸಕಾರಾತ್ಮಕವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಈ ದತ್ತಾಂಶವು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ, ಹರಿಯಾಣ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಕೇವಲ ಇತರರನ್ನು ದೂಷಿಸುವುದರಲ್ಲಿ ತೊಡಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.