ADVERTISEMENT

ಮೋದಿ 3.0 ಸರ್ಕಾರ ಅಧಿಕೃತ ಕಾರ್ಯಾರಂಭ: ನೂತನ ಸಚಿವರ ಅಧಿಕಾರ ಸ್ವೀಕಾರ

ಪಿಟಿಐ
Published 11 ಜೂನ್ 2024, 23:38 IST
Last Updated 11 ಜೂನ್ 2024, 23:38 IST
<div class="paragraphs"><p>ಗೃಹ ಸಚಿವರಾಗಿ ಅಧಿಕಾರ ವಹಿಸುವುದಕ್ಕೂ ಮುನ್ನ ಅಮಿತ್‌ ಶಾ ಅವರು ನವದೆಹಲಿಯ ರಾಷ್ಟ್ರೀಯ ಪೊಲೀಸ್‌ ಸ್ಮಾರಕಕ್ಕೆ ಭೇಟಿ ನೀಡಿದ ಗೌರವ ಸಲ್ಲಿಸಿದರು</p></div>

ಗೃಹ ಸಚಿವರಾಗಿ ಅಧಿಕಾರ ವಹಿಸುವುದಕ್ಕೂ ಮುನ್ನ ಅಮಿತ್‌ ಶಾ ಅವರು ನವದೆಹಲಿಯ ರಾಷ್ಟ್ರೀಯ ಪೊಲೀಸ್‌ ಸ್ಮಾರಕಕ್ಕೆ ಭೇಟಿ ನೀಡಿದ ಗೌರವ ಸಲ್ಲಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರದ ಸಂಪುಟ ದರ್ಜೆ ಸಚಿವರು ಮತ್ತು ರಾಜ್ಯ ದರ್ಜೆ ಸಚಿವರು ಮಂಗಳವಾರ ತಮ್ಮ ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಬದಲಾವಣೆ ಮತ್ತು ನಿರಂತರತೆ ಎರಡನ್ನೂ ಸೂಚಿಸುವ ಮೋದಿ 3.0 ಆಡಳಿತ ಯಂತ್ರ ತನ್ನ ಕೆಲಸವನ್ನು ಅಧಿಕೃತವಾಗಿ ಆರಂಭಿಸಿತು.

ADVERTISEMENT

ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದರು. ಎನ್‌ಡಿಎ ಮೈತ್ರಿಕೂಟ ಸರ್ಕಾರದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿತ್ತು.

ಕಳೆದ ಅವಧಿಯಲ್ಲಿ ಸಚಿವರಾಗಿದ್ದ ಅಮಿತ್‌ ಶಾ (ಗೃಹ), ರಾಜನಾಥ್ ಸಿಂಗ್‌ (ರಕ್ಷಣೆ), ನಿರ್ಮಲಾ ಸೀತಾರಾಮನ್‌ (ಹಣಕಾಸು, ಕಾರ್ಪೊರೇಟ್‌ ವ್ಯವಹಾರ) ಮತ್ತು ಎಸ್‌.ಜೈಶಂಕರ್ (ವಿದೇಶಾಂಗ) ಸೇರಿದಂತೆ ಕೆಲವರನ್ನು ಅದೇ ಖಾತೆಗಳಲ್ಲಿ ಮುಂದುವರಿಸಲಾಗಿದೆ.

‘ದೇಶ ಮೊದಲು ಮತ್ತು ವಸುದೈವ ಕುಟುಂಬಕಂ ಎಂಬುದು ಭಾರತದ ವಿದೇಶಾಂಗ ನೀತಿಯ ಎರಡು ಸೂತ್ರಗಳಾಗಿವೆ’ ಎಂದು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಚಿವ ಎಸ್‌.ಜೈಶಂಕರ್‌ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಮೋದಿ ಅವರ ‘ವಿಕಸಿತ ಭಾರತ’ ಪರಿಕಲ್ಪನೆಯ ಈಡೇರಿಕೆಗಾಗಿ ಕೆಲಸ ಮಾಡುತ್ತೇವೆ ಎಂದು ಹಲವು ಸಚಿವರು ಹೇಳಿದರು.

ಗುಜರಾತ್‌ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್‌ ರಘುನಾಥ್‌ ಪಾಟೀಲ್ ಅವರು ಜಲಶಕ್ತಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಬೆಂಬಲಿಗರು ‘ಭಾರತ್‌ ಮಾತಾ ಕಿ ಜೈ’ ಹಾಗೂ ‘ವಂದೇ ಮಾತರಂ’ ಎಂಬ ಘೋಷಣೆ ಮೊಳಗಿಸಿದರು.

ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಬಿಹಾರದ ಚಿರಾಗ್‌ ಪಾಸ್ವಾನ್‌ ಅವರು ಅಧಿಕಾರ ಸ್ವೀಕಾರಕ್ಕೂ ಮುನ್ನ ತಮ್ಮ ತಾಯಿ ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಣ್ಣ ಮಟ್ಟದ ಧಾರ್ಮಿಕ ಆಚರಣೆ ನಡೆಸಿದರು. 

‘ದೇಶದ ಭದ್ರತೆ ಮುಂದಿನ ಹಂತಕ್ಕೆ’

‘ಗೃಹ ಸಚಿವಾಲಯವು ಈ ಹಿಂದಿನಂತೆಯೇ ದೇಶ ಮತ್ತು ಇಲ್ಲಿನ ಜನರಿಗೆ ಭದ್ರತೆ ಒದಗಿಸಲು ಬದ್ಧವಾಗಿರುತ್ತದೆ. ಮೋದಿ ಅವರ ಮೂರನೇ ಅವಧಿಯ ಆಡಳಿತದಲ್ಲಿ ದೇಶದ ಭದ್ರತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಗಳು ನಡೆಯಲಿವೆ’ ಎಂದು ಎರಡನೇ ಬಾರಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಅಮಿತ್‌ ಶಾ ಹೇಳಿದರು. ‘ಭಯೋತ್ಪಾದನೆ ಒಳನುಸುಳಿವಿಕೆ ಮತ್ತು ನಕ್ಸಲೀಯ ಚಟುವಟಿಕೆಗಳ ವಿರುದ್ಧದ ಭದ್ರಕೋಟೆಯಾಗಿ ಭಾರತವನ್ನು ಕಟ್ಟಲಾಗುವುದು’ ಎಂದು ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.