ADVERTISEMENT

ಪಾಕ್‌ ರೈಲಿಗೆ ಭಾರತ ತಡೆ: ಲಾಹೋರ್‌ಗೆ ತೆರಳಬೇಕಾಗಿದ್ದ 130 ಸಿಖ್‌ ಯಾತ್ರಾರ್ಥಿಗಳು

ಪಿಟಿಐ
Published 15 ಜೂನ್ 2019, 20:16 IST
Last Updated 15 ಜೂನ್ 2019, 20:16 IST
ಭಾರತೀಯ ಸಿಖ್‌ ಯಾತ್ರಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ವಿರುದ್ಧ ಘೋಷಣೆ ಕೂಗಿದ್ದರು. -ಎಎಫ್‌ಪಿ ಚಿತ್ರ
ಭಾರತೀಯ ಸಿಖ್‌ ಯಾತ್ರಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ವಿರುದ್ಧ ಘೋಷಣೆ ಕೂಗಿದ್ದರು. -ಎಎಫ್‌ಪಿ ಚಿತ್ರ   

ನವದೆಹಲಿ: 130 ಸಿಖ್‌ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಪಾಕಿಸ್ತಾನದಿಂದ ಬರುತ್ತಿದ್ದ ರೈಲಿಗೆ ಅತ್ತಾರಿ ಪ್ರವೇಶಿಸಲು ಅನುಮತಿ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದನೇ ಸಿಖ್‌ ಗುರು ಅರ್ಜುನ್‌ ದೇವ್‌ ಅವರ ಸ್ಮರಣಾರ್ಥ ಲಾಹೋರ್‌ನಲ್ಲಿ ನಡೆಯುವ 'ಶಹಿದಿ ಜೋರ ಮೇಳ'ದಲ್ಲಿ ಪಾಲ್ಗೊಳ್ಳಲು ಈ ಯಾತ್ರಾರ್ಥಿಗಳು ಪಾಕಿಸ್ತಾನಕ್ಕೆ ತೆರಳಬೇಕಾಗಿತ್ತು.

ಪಾಕಿಸ್ತಾನವು ಸುಮಾರು 200 ಭಾರತೀಯ ಸಿಖ್‌ ಯಾತ್ರಾರ್ಥಿಗಳಿಗೆ ವೀಸಾ ನೀಡಿತ್ತು. ಶುಕ್ರವಾರ ಈ ಯಾತ್ರಾರ್ಥಿಗಳು ಪಾಕಿಸ್ತಾನಿ ರೈಲ್ವೆ ಮೂಲಕ ಲಾಹೋರ್‌ಗೆ ತೆರಳಬೇಕಾಗಿತ್ತು.

ADVERTISEMENT

ಭಾರತದ ಈ ಕ್ರಮಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಸಾಮಾನ್ಯವಾಗಿ ಅನುಮತಿ ನೀಡುವ ಬಗ್ಗೆ ವಿದೇಶಾಂಗ ಸಚಿವಾಲಯ ನಿರ್ಧಾರ ಕೈಗೊಳ್ಳುತ್ತದೆ.

ರೈಲ್ವೆ ಪ್ರವೇಶಕ್ಕೆ ಅನುಮತಿ ದೊರೆಯದಿರುವುದಕ್ಕೆ ಯುನೈಟೆಡ್‌ ಅಕಾಲಿ ದಳದ ಪ್ರಧಾನ ಕಾರ್ಯದರ್ಶಿ ಪರಮ್‌ಜೀತ್‌ ಸಿಂಗ್‌ ಜಿಜಾನಿ ಸಹ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಪಾಕಿಸ್ತಾನಕ್ಕೆ ಯಾತ್ರಾರ್ಥಿಗಳ ತಂಡವನ್ನು ಕರೆದೊಯ್ಯುವ ನೇತೃತ್ವವನ್ನು ಅವರು ವಹಿಸಿದ್ದರು.

‘ಪಾಕಿಸ್ತಾನದ ರಾಯಭಾರ ಕಚೇರಿ 130 ಸಿಖ್‌ ಯಾತ್ರಾರ್ಥಿಗಳಿಗೆ ಲಾಹೋರ್‌ಗೆ ಭೇಟಿ ನೀಡಲು ಏಳು ದಿನಗಳ ವೀಸಾ ನೀಡಿದೆ’ ಎಂದು ಅವರು ತಿಳಿಸಿದ್ದಾರೆ.

87 ಯಾತ್ರಾರ್ಥಿಗಳಿಗೆ ದೊರೆಯದ ವೀಸಾ
87 ಸಿಖ್‌ ಯಾತ್ರಾರ್ಥಿಗಳಿಗೆ ವೀಸಾ ನಿರಾಕರಿಸಿದ ಪಾಕಿಸ್ತಾನದ ನಿರ್ಧಾರಕ್ಕೆ ಭಾರತ ಆಕ್ಷೇಪ ವ್ಯಕ್ತಪ‍ಡಿಸಿದೆ. ಗುರು ಅರ್ಜುನ್‌ ದೇವ್‌ ಸ್ಮರಣಾರ್ಥ ನಡೆಯುವ ‘ಶಹಿದಿ ಜೋರ ಮೇಳ’ದಲ್ಲಿ ಪಾಲ್ಗೊಳ್ಳಲು ಜೂನ್‌ 7ರಂದು ಲಾಹೋರ್‌ಗೆ ತೆರಳಲು ವೀಸಾ ನೀಡುವಂತೆ ಈ ಯಾತ್ರಾರ್ಥಿಗಳು ಪಾಕಿಸ್ತಾನವನ್ನು ಕೋರಿದ್ದರು.

ಪಾಕಿಸ್ತಾನ ವೀಸಾ ನಿರಾಕರಿಸಿರುವುದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಭಟನೆ ವ್ಯಕ್ತಪಡಿಸಿದೆ.

ಇದು ಈಗಾಗಲೇ ಹದಗೆಟ್ಟಿರುವ ಭಾರತ ಮತ್ತು ಪಾಕಿಸ್ತಾನ ಸಂಬಂಧದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.