ಗ್ಯಾಂಗ್ಟಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಪಕ್ಷ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತ ಸಾಧಿಸಿದೆ. ಇದರೊಂದಿಗೆ, ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಮುಂದುವರಿಯಲಿದೆ.
ಪಿ.ಎಸ್.ಗೊಲೇ ಎಂದೂ ಖ್ಯಾತರಾಗಿರುವ ತಮಾಂಗ್, ಪಶ್ಚಿಮ ಸಿಕ್ಕಿಂನ ಸೊರೆಂಗ್‌ನಲ್ಲಿ 1968ರ ಫೆಬ್ರುವರಿ 10ರಂದು ಜನಿಸಿದರು.
ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಅವರು, 1993ರಲ್ಲಿ ಶಿಕ್ಷಕ ವೃತ್ತಿ ತೊರೆದು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಪಕ್ಷ ಸೇರಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡರು.
1994ರಲ್ಲಿ ಚಕುಂಗ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾದರು. ನಂತರದ ಎರಡು (1999, 2004) ಅವಧಿಯಲ್ಲಿಯೂ ಅವರಿಗೆ ಜಯ ಒಲಿಯಿತು. 2009ರಲ್ಲಿ ಬರ್ಟಕ್ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.
2013ರಲ್ಲಿ ಎಸ್‌ಡಿಎಫ್‌ನಿಂದ ಹೊರಬಂದು ತಮ್ಮದೇ ಪಕ್ಷ ಸ್ಥಾಪಿಸಿದರು. 2014ರಲ್ಲಿ ಎಸ್‌ಕೆಎಂನಿಂದ ಕಣಕ್ಕಿಳಿದು ಬರ್ಟಕ್‌ನಿಂದಲೇ ಗೆಲುವು ಸಾಧಿಸಿದರು.
2019ರಲ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯದೆ ತಮ್ಮ ಪಕ್ಷಕ್ಕೆ ಬಹುಮತ ತಂದುಕೊಟ್ಟ ಅವರು, ಬಳಿಕ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ನಂತರ ಮುಖ್ಯಮಂತ್ರಿಯಾದರು. ಆಗ ಸಿಎಂ ಆಗಿದ್ದ ಪವನ್ ಕುಮಾರ್ ಚಾಮ್ಲಿಂಗ್ ಅವರು ಪೊಕ್ಲಾಕ್–ಕಮ್ರಾಂಗ್ ಮತ್ತು ನಮ್ಚಿ ಸಿಂಘಿತಾಂಗ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಹೀಗಾಗಿ, ಅವರು ತ್ಯಜಿಸಿದ ನಮ್ಚಿ ಸಿಂಘಿತಾಂಗ್‌ನಿಂದ ತಮಾಂಗ್ ಗೆದ್ದರು.
ಅದರೊಂದಿಗೆ ಅವರು, 1994ರಿಂದ 2019ರ ವರೆಗೆ ಸತತ ಐದು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಚಾಮ್ಲಿಂಗ್ ಅವರ ಎಸ್‌ಡಿಎಫ್ ಓಟಕ್ಕೆ ತಡೆಯೊಡ್ಡಿ, 2019ರಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೇರಿಸಿದರು. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿಯೂ ಅಧಿಕಾರಕ್ಕೇರಿದರು.
2019ರಲ್ಲಿ 17 ಸ್ಥಾನಗಳನ್ನು ಗೆದ್ದಿದ್ದ ಎಸ್‌ಕೆಎಂ ಈ ಬಾರಿ 26 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಇನ್ನಷ್ಟೇ ಫಲಿತಾಂಶ ಪ್ರಕಟವಾಗಬೇಕಿರುವ 5 ಕಡೆ ಮುನ್ನಡೆಯನ್ನೂ ಕಾಯ್ದುಕೊಂಡಿದೆ. ಭಾರಿ ಮುಖಭಂಗ ಅನುಭವಿಸಿರುವ ಎಸ್‌ಡಿಎಫ್, ಕೇವಲ 1 ಸ್ಥಾನ ಗೆದ್ದು, ಎರಡನೇ 'ಅತಿದೊಡ್ಡ ಪಕ್ಷ' ಎನಿಸಿದೆ.
ಈ ಪಕ್ಷ ಕಳೆದ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.