ADVERTISEMENT

41 ಕಾರ್ಮಿಕರ ರಕ್ಷಣೆ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಹರ್ಷ; ಗಡ್ಕರಿ ನಿರಾಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2023, 16:06 IST
Last Updated 28 ನವೆಂಬರ್ 2023, 16:06 IST
<div class="paragraphs"><p>ದ್ರೌಪದಿ ಮುರ್ಮು ಹಾಗೂ ನರೇಂದ್ರ ಮೋದಿ (ಸಂಗ್ರಹ ಚಿತ್ರ)</p></div>

ದ್ರೌಪದಿ ಮುರ್ಮು ಹಾಗೂ ನರೇಂದ್ರ ಮೋದಿ (ಸಂಗ್ರಹ ಚಿತ್ರ)

   

ಪಿಟಿಐ ಚಿತ್ರ

ನವದೆಹಲಿ: ಚಾರ್‌ ಧಾಮ್‌ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು 17 ದಿನಗಳ ನಂತರ ಸುರಕ್ಷಿತವಾಗಿ ಹೊರಬಂದ ಮಾಹಿತಿ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. 

ADVERTISEMENT

ಮೈಕ್ರೊ ಬ್ಲಾಗಿಂಗ್‌ ‘ಎಕ್ಸ್‌’ ವೇದಿಕೆಯ ತಮ್ಮ ಖಾತೆ ಮೂಲಕ ಹರ್ಷ ವ್ಯಕ್ತಪಡಿಸಿರುವ ಅವರ, ‘ಉತ್ತರಾಖಂಡದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ತಿಳಿದು ಹರ್ಷವೆನಿಸಿದೆ. ಕಳೆದ 17 ದಿನಗಳಿಂದ ನಡೆದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಎದುರಾದ ಹಲವು ಅಡೆತಡೆಗಳು, ಸವಾಲುಗಳನ್ನು ಎದುರಿಸಿ ಇವರನ್ನು ರಕ್ಷಿಸಲಾಗಿದೆ. ಇವರನ್ನು ರಕ್ಷಿಸುವಲ್ಲಿ ಕಲ್ಪಿಸಲಾದ ಕ್ಲಿಷ್ಟಕರ ಮೂಲಸೌಕರ್ಯ ಹಾಗೂ ವೈಯಕ್ತಿಕ ಅಪಾಯವನ್ನೂ ಮೀರಿ ಕಾರ್ಮಿಕರನ್ನು ಹೊರತರುವಲ್ಲಿ ನಡೆಸಿದ ಸಾಹಸಕ್ಕೆ ಇಡೀ ದೇಶವೇ ವಂದಿಸುತ್ತದೆ. ಐತಿಹಾಸಿಕವಾದ ಈ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ನುರಿತ ತಜ್ಞರು, ಕಾರ್ಮಿಕರಿಗೂ ಅಭಿನಂದನೆಗಳು’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಎಕ್ಸ್ ವೇದಿಕೆಯಲ್ಲಿ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ.

‘ಉತ್ತರಕಾಶಿಯಲ್ಲಿ ನಮ್ಮ ಕಾರ್ಮಿಕ ಸಹೋದರರ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿ ಮಾಡಿದೆ. ಸುರಂಗದಲ್ಲಿ ಸಿಲುಕಿದ ಸಹೋದ್ಯೋಗಿಗಳ ಧೈರ್ಯ, ತಾಳ್ಮೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಇವರೆಲ್ಲರ ಯೋಗಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

‘ಸುರಂದಲ್ಲಿ ಸಿಲುಕಿದ ಹಲವು ದಿನಗಳ ನಂತರ ತಮ್ಮ ಪ್ರೀತಿಪಾತ್ರರನ್ನು ಇವರು ಭೇಟಿಯಾಗಲಿದ್ದಾರೆ. ಈ ಸವಾಲಿನ ಸಮಯದಲ್ಲಿ ಅವರೆಲ್ಲರ ಕುಟುಂಬಗಳು ತೋರಿಸಿದ ತಾಳ್ಮೆ ಮತ್ತು ಧೈರ್ಯ ಅಭಿನಂದನಾರ್ಹ’ ಎಂದಿದ್ದಾರೆ. 

ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತನ್ ಗಡ್ಕರಿ ಅವರು ಈಗ ಮನಸ್ಸು ನಿರಾಳವಾಗಿದೆ ಎಂದಿದ್ದಾರೆ. 

‘41 ಕಾರ್ಮಿಕರ ಸುರಕ್ಷಿತವಾಗಿ ಮರಳಿದ್ದರಿಂದ ಮನಸ್ಸು ನಿರಾಳವಾಗಿದೆ. ಹಲವು ಸಂಸ್ಥೆಗಳ ಅತ್ಯಂತ ಯೋಜನಾಬದ್ಧ ಸಂಘಟಿತ ಪ್ರಯತ್ನ ಫಲವಿದು. ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಇದಾಗಿದೆ’ ಎಂದು ಗಡ್ಕರಿ ಹೇಳಿದ್ದಾರೆ.

ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರೂ ಸಂಭ್ರಮ ಹಂಚಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.