ಚಂಡೀಗಡ: ಆಗಸ್ಟ್ 15ರಂದು ಮನೆಗಳ ಮೇಲೆ ತ್ರಿವರ್ಣ ಧ್ವಜದ ಬದಲಿಗೆ ‘ಕೇಸರಿ’ ಅಥವಾ ಸಿಖ್ ಧಾರ್ಮಿಕ ಧ್ವಜಗಳನ್ನು ಹಾರಿಸುವಂತೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಂಗ್ರೂರ್ ಸಂಸದ, ಸಿಖ್ ರಾಜ್ಯ ಪ್ರತಿಪಾದಕ ಸಿಮ್ರಾನ್‌ಜಿತ್ ಸಿಂಗ್ ಮಾನ್ ಕರೆ ನೀಡಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ‘ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ)’ ಅಭಿಯಾನಕ್ಕೆ ಕೇಂದ್ರ ಸರ್ಕಾರ ಕರೆಕೊಟ್ಟಿದ್ದು, ಆಗಸ್ಟ್ 15ರಂದು ಮನೆ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡುವಂತೆ ಮನವಿ ಮಾಡಿದೆ.
ಇದಕ್ಕೆ ಪ್ರತಿಯಾಗಿ ಸಿಮ್ರಾನ್‌ಜಿತ್ ಸಿಂಗ್ ಮಾನ್, ಆಗಸ್ಟ್ 14 ಮತ್ತು 15ರಂದು ಮನೆಗಳ ಮೇಲೆ ಕೇಸರಿ ಧ್ವಜಗಳು ಅಥವಾ ‘ನಿಶಾನ್ ಸಾಹೀಬ್’ ಹಾರಿಸುವಂತೆ ಮನವಿ ಮಾಡಿ ಸಂದೇಶ ಬಿಡುಗಡೆ ಮಾಡಿದ್ದಾರೆ.
‘ನಿಶಾನ್ ಸಾಹೀಬ್’ ಸಿಖ್ ಧಾರ್ಮಿಕ ಸಂಕೇತದ ಧ್ವಜವಾಗಿದೆ.
ಮಾನ್ ಹೇಳಿಕೆಗೆ ವಿವಿಧ ರಾಜಕೀಯ ಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
‘ಧ್ವಜಗಳನ್ನು ಹಾರಿಸುವ ಬದಲು ಲಡಾಖ್ ಅನ್ನು ಚೀನಾದಿಂದ ಬೇರ್ಪಡಿಸುವುದೇ ಸ್ವಾತಂತ್ರ್ಯದ 75ನೇ ವರ್ಷದ ನಿಜವಾದ ಆಚರಣೆಯಾಗಬಲ್ಲದು. ಬಡವರಿಗೆ ಆಹಾರ ಮತ್ತು ವಸತಿ ಕಲ್ಪಿಸುವುದು ಸರಿಯಾದ ಆಚರಣೆಯಾಗಬಲ್ಲದು. ನ್ಯಾನ್ಸಿ ಪೆಲೊಸಿ (ಅಮೆರಿಕ ಸಂಸತ್ ಸ್ಪೀಕರ್) ಮಾಡಬಹುದಾದ್ದನ್ನು ನಮಗೆ ಯಾಕೆ ಮಾಡಲು ಸಾಧ್ಯವಿಲ್ಲ’ ಎಂದು ಕೆಲವು ದಿನಗಳ ಹಿಂದೆ ಸಿಮ್ರಾನ್‌ಜಿತ್ ಸಿಂಗ್ ಮಾನ್ ಟ್ವೀಟ್ ಮಾಡಿದ್ದರು.
ತೀವ್ರಗಾಮಿ ನಾಯಕತ್ವದ ಒಂದು ವಿಭಾಗವು ರಾಜ್ಯದಲ್ಲಿ ಶಾಂತಿಯುತ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಕಾಂಗ್ರೆಸ್ ಟೀಕಿಸಿದೆ.
ರಾಷ್ಟ್ರಧ್ವಜ ರಾಷ್ಟ್ರದ ಸಂಕೇತವಾಗಿದ್ದು ಪ್ರತಿಯೊಬ್ಬ ಭಾರತೀಯನೂ ಅದನ್ನು ಗೌರವಿಸಬೇಕು ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ಹೇಳಿದ್ದಾರೆ.
ನಮ್ಮ ಪೂರ್ವಜರ ತ್ಯಾಗದಿಂದಾಗಿ ದೇಶವು ಬ್ರಿಟಿಷರಿಂದ ಮುಕ್ತವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದ್ದಾರೆ.
‘ತ್ರಿವರ್ಣ ಧ್ವಜವನ್ನು ವಿರೋಧಿಸುತ್ತಿರುವವರು ಸಂವಿಧಾನದ ಪ್ರಕಾರವೇ ಪ್ರಮಾಣವಚನ ಸ್ವೀಕರಿಸಿದವರು’ ಎಂದು ಸಿಮ್ರಾನ್‌ಜಿತ್ ಸಿಂಗ್ ಮಾನ್ ಅವರನ್ನು ಉದ್ದೇಶಿಸಿ ಭಗವಂತ ಮಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.