ADVERTISEMENT

ದೇಶದ 4 ರಾಜ್ಯಗಳ 11 ಸ್ಥಳಗಳಲ್ಲಿ ಏಕಕಾಲಕ್ಕೆ ಎನ್‌ಐಎ ದಾಳಿ: ಮೂವರ ವಶ

ದೇಶದ ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ಏಕಕಾಲಕ್ಕೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಮೇ 2024, 16:34 IST
Last Updated 21 ಮೇ 2024, 16:34 IST
ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ್ದ ಸ್ಥಳ ಪರಿಶೀಲನೆ ನಡೆಸಿದ್ದ ತನಿಖಾಧಿಕಾರಿಗಳು (ಸಂಗ್ರಹ ಚಿತ್ರ)
ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ್ದ ಸ್ಥಳ ಪರಿಶೀಲನೆ ನಡೆಸಿದ್ದ ತನಿಖಾಧಿಕಾರಿಗಳು (ಸಂಗ್ರಹ ಚಿತ್ರ)   

ಬೆಂಗಳೂರು: ನಗರದ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಮಾರ್ಚ್‌ 1ರಂದು ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ಮಂಗಳವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದರು.

ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತರಾದ ಮುಸಾವೀರ್‌ ಹುಸೇನ್‌ ಶಾಜೀದ್‌ ಹಾಗೂ ಅಬ್ದುಲ್‌ ಮಥೀನ್‌ ಅಹ್ಮದ್‌ ತಾಹಾಗೆ ಹಣಕಾಸು ನೆರವು ಹಾಗೂ ಬಾಂಬ್‌ ಸ್ಫೋಟಕ್ಕೆ ಸಹಕಾರ ನೀಡಿದ್ದ ಸುಳಿವು ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಕೆಲವು ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿ, ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ADVERTISEMENT

ನಗರದ ಬನಶಂಕರಿ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಪರಿಶೀಲಿಸಲಾಗಿದೆ. ಬೆಂಗಳೂರಿನ ಡಾ.ಸಬೀಲ್‌ ಅಹಮದ್‌ ಅಲಿಯಾಸ್‌ ಮೋಟು ಡಾಕ್ಟರ್‌ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.  ಶೋಯಿಬ್‌ ಮಿರ್ಜಾ ಹಾಗೂ ಆತನ ಸಹೋದರ ಅಜೀಜ್‌ ಅಹಮದ್‌ ಮಿರ್ಜಾ ಅವರನ್ನು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆಯಲಾಗಿದೆ.  

2012ರಲ್ಲಿ ಬೆಂಗಳೂರು, ಹುಬ್ಬಳ್ಳಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ಆರೋಪಿಯಾಗಿದ್ದ ಸಬೀಲ್‌ ಅಹಮದ್‌ ವಿದೇಶಕ್ಕೆ ಪರಾರಿಯಾಗಿದ್ದ. 2020ರಲ್ಲಿ ಅಪಘ್ಗಾನಿಸ್ತಾನದಿಂದ ಸಬೀಲ್‌ನನ್ನು ಗಡಿಪಾರು ಮಾಡಲಾಗಿತ್ತು. ದೇಶಕ್ಕೆ ವಾಪಸ್‌ ಬಂದ ಮೇಲೆ ಆತನನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಬಿಡುಗಡೆಗೊಂಡಿದ್ದ. ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ನಗರದ ಬ್ರೂಕ್‌ಫೀಲ್ಡ್‌ನ ಐಟಿಪಿಎಲ್‌ ರಸ್ತೆ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1ರ ಮಧ್ಯಾಹ್ನ 12.30ರ ಸುಮಾರಿಗೆ ಬಾಂಬ್‌ ಸ್ಫೋಟ ನಡೆದಿತ್ತು. ಊಟಕ್ಕೆ ಬಂದಿದ್ದ ಗ್ರಾಹಕರು ಗಾಯಗೊಂಡಿದ್ದರು. ಸ್ಥಳೀಯ ಪೊಲೀಸರು ತನಿಖೆ ನಡೆಸಿದ ನಂತರ, ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಮುಸಾವೀರ್‌ ಹುಸೇನ್‌ ಶಾಜೀದ್‌ ಹಾಗೂ ಅಬ್ದುಲ್‌ ಮಥೀನ್‌ ಅಹ್ಮದ್‌ ತಾಹಾ ಎಂಬುವರನ್ನು ಕೋಲ್ಕತ್ತದಲ್ಲಿ ಕೃತ್ಯ ನಡೆದ 43 ದಿನಗಳ ಬಳಿಕ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಇಬ್ಬರು ಶಂಕಿತರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನವರು.

‘2012ರಲ್ಲಿ ಲಷ್ಕರ್‌–ಎ–ತೊಯ್ಬಾ ಸಂಘಟನೆಯೊಂದಿಗೆ ಸೇರಿ ಬೆಂಗಳೂರು, ಹುಬ್ಬಳ್ಳಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪಿಗಳು ಹಾಗೂ ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತರೊಂದಿಗೆ ನಂಟು ಹೊಂದಿದ್ದವರು ನೆಲೆಸಿರುವ 11 ಸ್ಥಳಗಳಲ್ಲಿ ಮಗಳವಾರ ದಾಳಿ ನಡೆಸಿ ಪರಿಶೀಲಿಸಲಾಗಿದೆ. ದಾಳಿ ವೇಳೆ ದೊರೆತ ಎಲ್ಲ ದಾಖಲೆಗಳು, ಕಂಪ್ಯೂಟರ್‌, ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ಭದ್ರತೆ ಹೆಚ್ಚಳ: ಉದ್ದೇಶ ವಿಫಲ

ವೈಟ್‌ಫೀಲ್ಡ್‌ ಭಾಗದಲ್ಲಿ ದುಷ್ಕೃತ್ಯ ಎಸಗಲು ಮುಸಾವೀರ್‌ ಹುಸೇನ್‌ ಶಾಜೀದ್‌ ಹಾಗೂ ಅಬ್ದುಲ್‌ ಮಥೀನ್‌ ಅಹ್ಮದ್‌ ತಾಹಾ ಸಂಚು ರೂಪಿಸಿದ್ದರು. ಅಲ್ಲಿ ಕೃತ್ಯ ಎಸಗಿದರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಬಹುದು ಹಾಗೂ ಉಗ್ರ ಸಂಘಟನೆಗಳ ಒಲವು ಗಳಿಸಬಹುದೆಂದು ಯೋಜನೆ ರೂಪಿಸಿದ್ದರು. ಆ ಭಾಗದಲ್ಲಿ ಭದ್ರತೆ ಹೆಚ್ಚಿದ್ದರಿಂದ ಶಂಕಿತರ ಉದ್ದೇಶ ವಿಫಲವಾಗಿತ್ತು. ನಂತರ ರಾಮೇಶ್ವರಂ ಕೆಫೆಗೆ ಬಾಂಬ್‌ ಇಟ್ಟಿದ್ದರು ಎಂದು ಮೂಲಗಳು ಹೇಳಿವೆ.

ಕೊಯಮತ್ತೂರಿನ ಆಸ್ಪತ್ರೆ ಮೇಲೆ ದಾಳಿ

‘ಕೊಯಮತ್ತೂರಿನ ಆಸ್ಪತ್ರೆಯೊಂದರ ಮೇಲೂ ಎನ್‌ಐಎ ದಾಳಿ ನಡೆಸಿದೆ. ಅಲ್ಲಿನ ವೈದ್ಯರಿಬ್ಬರು ಬಂಧಿತರಿಗೆ ಹಣಕಾಸು ನೆರವು ನೀಡಿದ್ದರು. ಬಾಂಬ್‌ ಸ್ಫೋಟಿಸುವ ಬಾಂಬ್‌ ಇರಿಸುವ ಸ್ಥಳದ ಬಗ್ಗೆ ನಿರ್ದೇಶನ ನೀಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಆ ಇಬ್ಬರು ವೈದ್ಯರನ್ನು ಸದ್ಯಕ್ಕೆ ವಶಕ್ಕೆ ಪಡೆದಿಲ್ಲ’ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದಲ್ಲೂ ಇಬ್ಬರು ವಶಕ್ಕೆ

'ರಾಮೇಶ್ವರಂ ಕೆಫೆ’ಯಲ್ಲಿನ ಸ್ಫೋಟಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಇಬ್ಬರನ್ನು ಎನ್‌ಐಎ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆ ರಾಯದುರ್ಗಂನ ಮನೆಯಿಂದ ಬೆಂಗಳೂರು ಮೂಲದ ಟೆಕಿ ಸೋಹೆಲ್, ತೆಲಂಗಾಣದ ವಿಕಾರಾಬಾದ್‌ನಲ್ಲಿ ಪುಣೆ ಮೂಲದ, 50 ವರ್ಷ ವಯಸ್ಸಿನ ಉದ್ಯಮಿಯನ್ನು ವಶಕ್ಕೆ ಪಡೆಯಲಾಗಿದೆ.

ಸೋಹೆಲ್‌ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮೂಲಗಳ ಪ್ರಕಾರ, ಆತನ ಖಾತೆಗಳಲ್ಲಿ ದೊಡ್ಡ ಮೊತ್ತ ಠೇವಣಿಯಾಗಿರುವ ಕುರಿತು ಪ್ರಶ್ನಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.