ತಿರುವನಂತಪುರ: ರಾಮಮಂದಿರ ವಿಡಿಯೊ ಸಂದೇಶ ಕುರಿತಂತೆ ಚಲನಚಿತ್ರ ಗಾಯಕಿ ಕೆ.ಎಸ್ ಚಿತ್ರಾ ಅವರ ಬೆಂಬಲಕ್ಕೆ ಕೇರಳ ಬಿಜೆಪಿ ನಿಂತಿದೆ.
ಈ ಬಗ್ಗೆ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಅವರು ಚಿತ್ರಾ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ರಾಮಮಂದಿರ ಉದ್ಘಾಟನೆ ಸಮಯದಲ್ಲಿ ರಾಮನಾಮ ಜಪಿಸುವಂತೆ ಕರೆ ನೀಡಿದ ಚಲನಚಿತ್ರ ಗಾಯಕಿ ಕೆ.ಎಸ್ ಚಿತ್ರಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು.
ಕೆ.ಎಸ್ ಚಿತ್ರಾ ಅವರು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಪ್ಠಾಪನೆ ನಡೆಯುತ್ತಿರುವಾಗ ಪ್ರತಿಯೊಬ್ಬರು ‘ಶ್ರೀರಾಮ, ಜಯ ರಾಮ, ಜಯ ಜಯ ರಾಮ ಎಂಬ ಮಂತ್ರವನ್ನು ಪಠಿಸಬೇಕು. ಹಾಗೆಯೇ ಸಂಜೆ ಮನೆಗಳಲ್ಲಿ ಐದು ಬತ್ತಿಯ ದೀಪಗಳನ್ನು ಹಚ್ಚಬೇಕು. ದೇವರ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ‘ ಎಂದು ವಿಡಿಯೊದಲ್ಲಿ ಕರೆ ನೀಡಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದರು. ಕೆಲವರು ಈ ವಿಡಿಯೊಗೆ ಕೆಟ್ಟದಾಗಿ ಸಂದೇಶ ಕಳುಹಿಸುತ್ತಿದ್ದಾರೆ.
ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಗಾಯಕಿ ಚಿತ್ರ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಮಮಂದಿರ ಉದ್ಘಾಟನೆದಿನದಂದೂ ಮನೆಗಳಲ್ಲಿ ದೀಪ ಬೆಳಗಿಸುವಂತೆ ಗಾಯಕಿ ಚಿತ್ರಾ ಮನವಿ ಮಾಡಿರುವುದಕ್ಕೆ ಅವರ ಮೇಲೆ ಎಡ ಪಂಥೀಯ ಮತ್ತು ಜಿಹಾದಿ ಗುಂಪುಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ಮಾಡಿವೆ. ಪಿಣರಾಯಿ ವಿಜಯನ್ ಆಳ್ವಿಕೆಯಲ್ಲಿ ಒಬ್ಬ ಹಿಂದೂ ತನ್ನ ನಂಬಿಕೆಗಳನ್ನು ಸಹ ಅನುಯಾಯಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಕೃತ್ಯದ ಬಗ್ಗೆ ಕಾಂಗ್ರೆಸ್ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ. ನಾವು (ಕೇರಳ ಬಿಜೆಪಿ) ಕೆ.ಎಸ್ ಚಿತ್ರಾ ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.