ADVERTISEMENT

ಗಾಯಕ ಮೂಸೆವಾಲಾ ಕೊಲೆ ಪ್ರಕರಣ: ಶೂಟರ್‌ ಸಂತೋಷ್‌ ಜಾಧವ್‌ ಬಂಧಿಸಿದ ಪುಣೆ ಪೊಲೀಸ್‌

ಪಿಟಿಐ
Published 13 ಜೂನ್ 2022, 2:34 IST
Last Updated 13 ಜೂನ್ 2022, 2:34 IST
ಪಂಜಾಬಿ ಗಾಯಕ ಸಿಧು ಮೂಸೆವಾಲಾ
ಪಂಜಾಬಿ ಗಾಯಕ ಸಿಧು ಮೂಸೆವಾಲಾ   

ಪುಣೆ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಸಂಬಂಧ ಶೂಟರ್‌ ಸಂತೋಷ್‌ ಜಾಧವ್‌ನನ್ನು ಪುಣೆ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಜಾಧವ್‌ನ ಸಹಚರನನ್ನೂ ಪುಣೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಡಿಜಿಪಿ ಕುಲ್ವಂತ್‌ ಕುಮಾರ್‌ ಸರಂಗಲ್‌ ಅವರು ಬೆಳವಣಿಗೆಗಳ ಕುರಿತು ಇಂದು ಮಾಧ್ಯಮಗಳಿಗೆ ವಿವರ ನೀಡುವ ಸಾಧ್ಯತೆ ಇದೆ.

ಪುಣೆಯ ಮಂಚರ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ 2021ರ ಕೊಲೆ ಪ್ರಕರಣದಲ್ಲಿ ಜಾಧವ್‌ನನ್ನು ಬಂಧಿಸಲಾಗಿದೆ. ಆತ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನಾಗಿದ್ದಾನೆ. ಜಾಧವ್‌ ಪತ್ತೆಗಾಗಿ ಪುಣೆ ಗ್ರಾಮಾಂತರ ಪೊಲೀಸ್‌ ಠಾಣೆಯಿಂದ ಹಲವು ತಂಡಗಳನ್ನು ಕಳೆದ ವಾರ ಗುಜರಾತ್‌ ಮತ್ತು ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು.

ADVERTISEMENT

ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಜಾಧವ್‌ ಈಗ ಪೊಲೀಸರ ಕೈಗೆ ಸಿಲುಕಿದ್ದಾನೆ. ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಒಬ್ಬ ನಾಗನಾಥ್‌ ಸೂರ್ಯವಂಶಿ ಮತ್ತು ಜಾಧವ್‌ ಹೆಸರು ತನಿಖೆಯಲ್ಲಿ ಕೇಳಿ ಬಂದಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

2021ರಲ್ಲಿ ನಡೆದ ಕೊಲೆಯ ನಂತರ ಜಾಧವ್‌ಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಸಿದ್ದೇಶ್‌ ಕಾಂಬ್ಳೆಅಲಿಯಾಸ್‌ ಮಹಾಕಾಲ್ ಎಂಬುವವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆತನೂ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನಾಗಿದ್ದಾನೆ.

ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಮಹಾಕಾಲ್‌ನನ್ನು ದೆಹಲಿ ಪೊಲೀಸರು ಹಾಗೂ ಪಂಜಾಬ್‌ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಟ ಸಲ್ಮಾನ್‌ ಖಾನ್‌ ಮತ್ತು ಅವರ ತಂದೆ ಸಲೀಂ ಖಾನ್‌ ಅವರಿಗೆ ಜೀವ ಬೆದರಿಕೆ ಪತ್ರ ಬರೆದಿರುವ ಪ್ರಕರಣದಲ್ಲಿ ಮುಂಬೈ ಪೊಲೀಸರು ಆತನ ತೀವ್ರ ವಿಚಾರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.