ADVERTISEMENT

ಕಾಂಗ್ರೆಸ್‌ ಮುಳುಗುತ್ತಿರುವ ಟೈಟಾನಿಕ್‌ ಹಡಗು: ಪ್ರಧಾನಿ ಮೋದಿ

ಏಜೆನ್ಸೀಸ್
Published 7 ಏಪ್ರಿಲ್ 2019, 4:42 IST
Last Updated 7 ಏಪ್ರಿಲ್ 2019, 4:42 IST
   

ನಾಂದೇಡ್‌: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷವನ್ನು ಸಾಗರ ಗರ್ಭ ಸೇರಿರುವ ಟೈಟಾನಿಕ್‌ ಹಡಗಿಗೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಈ ಜಗತ್ತಿನಿಂದ ದೂರವಾಗುವ ದಿನ ದೂರವೇನೂ ಉಳಿದಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಶನಿವಾರ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿರುವ ಅವರು, ‘ಕಾಂಗ್ರೆಸ್‌ನ ಸದ್ಯದ ಪರಿಸ್ಥಿತಿ ಟೈಟಾನಿಕ್‌ ಹಡಗಿನಂತಾಗಿದೆ. ನಿತ್ಯವೂ ಮುಳುಗುತ್ತಿದೆ. ಈ ಹಡಗಿನಲ್ಲಿ ಕುಳಿತವರು ಕೂಡ ಮುಳುಗಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಕೂಡ ಕಾಂಗ್ರೆಸ್‌ನೊಂದಿಗೆ ಮುಳುಗುತ್ತಿದೆ. ಇಲ್ಲಿಗೆ ಬಂದವರು ಕಾಂಗ್ರೆಸ್‌ ಜತೆಗೇ ಮುಳುಗಬೇಕು. ಇಲ್ಲವೇ ಜೀವ ಉಳಿಸಿಕೊಳ್ಳಲು ಓಡಬೇಕು,’ ಎಂದು ಮೋದಿ ಗೇಲಿ ಮಾಡಿದ್ದಾರೆ.

‘ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 44ಕ್ಕೆ ಕುಸಿದಿತ್ತು. ಈ ಬಾರಿಯ ಪರಿಸ್ಥಿತಿ ಹಿಂದಿಗಿಂತಲೂ ಕೆಟ್ಟದಾಗಿದೆ. ಆದ್ದರಿಂದಲೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷಗಳ ಮುಖಂಡರಾದ ಶರದ್‌ ಪವಾರ್‌, ಪ್ರಫುಲ್‌ ಪಟೇಲ್‌, ರಾಜೀವ್‌ ಸತ್ವಾ ಅವರು ಚುನಾವಣೆಗೇ ಸ್ಪರ್ಧಿಸಿಲ್ಲ,’ ಎಂದು ಛೇಡಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧದ ಮೋದಿ ಟೀಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕಡೆಗೂ ಹೊರಳಿತು. ‘ರಾಹುಲ್‌ ಗಾಂಧಿ ಅವರು ಈ ಚುನಾವಣೆಯಲ್ಲಿ ಕೇರಳದ ವಯನಾಡಿಗೆ ಓಡಿಹೋಗಿದ್ದಾರೆ,’ಎಂದು ಅವರು ಗೇಲಿ ಮಾಡಿದರು. ರಾಹುಲ್‌ ಗಾಂಧಿಗೆ ಉತ್ತರ ಪ್ರದೇಶದ ಅಮೇಠಿಯಲ್ಲಿ ಅನಿಶ್ಚಿತತೆ ಎದುರಾಗಿದೆ. ಅಲ್ಲಿಇತ್ತೀಚಿಗೆ ನಡೆದಿದ್ದ ಕಾಂಗ್ರೆಸ್‌ ಸಮಾವೇಶ ಸಂಪೂರ್ಣ ವಿಫಲವಾಗಿತ್ತು. ಆ ಪಕ್ಷದ ಒಂದೇ ಒಂದು ಬಾವುಟವೂ ಅಲ್ಲಿ ಕಾಣಲಿಲ್ಲ. ಹೀಗಾಗಿ ಕಾಂಗ್ರೆಸ್‌ ಕುಟುಂಬ ತನಗೆ ಸುರಕ್ಷಿತ ಎನಿಸುವವಯನಾಡುಕ್ಷೇತ್ರವನ್ನು ಮೈಕ್ರೋಸ್ಕೋಪ್‌ ಹಾಕಿ ಹುಡುಕಿಕೊಂಡಿದೆ. ಆದರೆ,ಆ ಕ್ಷೇತ್ರದಲ್ಲಿ ಬಹುಸಂಖ್ಯಾತರೇ (ಹಿಂದೂಗಳು) ಅಲ್ಪಸಂಖ್ಯಾತರಾಗಿದ್ದಾರೆ,‘ ಎಂದರು.

ಟೈಟಾನಿಕ್‌ 1912ರಲ್ಲಿ ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ ಮುಳುಗಡೆಯಾದ ಭಾರಿ ಗಾತ್ರದ ವೈಭವೋಪೇತ ಹಡಗು. 1500 ಮಂದಿಯನ್ನು ಹೊತ್ತುಸೌತಾಂಪ್ಟನ್ ನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳಸಿದ್ದ ಟೈಟಾನಿಕ್‌ ಹಿಮ ಪರ್ವತವೊಂದಕ್ಕೆ ಡಿಕ್ಕಿ ಹೊಡೆದು ಸಾಗರತಳ ಸೇರಿತ್ತು. ಇದೇ ಸನ್ನಿವೇಶವನ್ನು ಕಥಾ ವಸ್ತುವಾಗಿಟ್ಟುಕೊಂಡು 1997ರಲ್ಲಿ ‘ಟೈಟಾನಿಕ್‌’ ಎಂಬಚಲನಚಿತ್ರವನ್ನೂ ನಿರ್ಮಾಣಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.