ನವದೆಹಲಿ: ಭಾರತ ಕುಸ್ತಿ ಫೆಡರೇಶನ್(ಡಬ್ಲ್ಯುಪಿಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿರುವುದಾಗಿ ದೆಹಲಿ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಕುಸ್ತಿಪಟುಗಳ ದೂರು ಆಧರಿಸಿ ದೆಹಲಿ ಪೊಲೀಸರ ತಂಡವು ಉತ್ತರ ಪ್ರದೇಶ, ಜಾರ್ಖಂಡ್, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳಿಗೆ ತೆರಳಿ ಸಾಕ್ಷ್ಯ ಸಂಗ್ರಹಿಸಿದೆ. ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಜೊತೆಯೂ ದೆಹಲಿ ಪೊಲೀಸರು ಸಂಪರ್ಕದಲ್ಲಿರುವುದಾಗಿ ಮಾಹಿತಿ ನೀಡಲಾಗಿದೆ.
ಸರ್ಕಾರಿ ವಕೀಲ ಅತುಲ್ ಶ್ರೀವಾಸ್ತವ ಅವರು ರೋಸ್ ಅವೆನ್ಯೂ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರಿಗೆ ಪ್ರಕರಣದ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ.
'ಪ್ರಕರಣದ ಗಂಭೀರತೆಯನ್ನು ಅರಿತು ಎಸ್‌ಐಟಿ ರಚಿಸಲಾಗಿದೆ. ಎಸ್‌ಐಟಿ ಪ್ರಕರಣದ ವಿಚಾರಣೆ ನಡೆಸಲಿದೆ’ಎಂದು ಅತುಲ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಪ್ರಕರಣದ ಸ್ವರೂಪವನ್ನು ಪರಿಗಣಿಸಿ ವರದಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಅವರು ನ್ಯಾಯಾಲಯಕ್ಕೆ ವಿನಂತಿಸಿದರು.
ಬಳಿಕ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ.
ನ್ಯಾಯಾಲಯದಿಂದಲೇ ತನಿಖೆಯ ಮೇಲ್ವಿಚಾರಣೆ ಮತ್ತು ನ್ಯಾಯಾಲಯದ ಮುಂದೆ ಸಂತ್ರಸ್ತರ ಹೇಳಿಕೆಯನ್ನು ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಸಲ್ಲಿಸಿದ್ದ ಮನವಿಯ ಮೇರೆಗೆ ನ್ಯಾಯಾಧೀಶರು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದರು.
ಅಪ್ರಾಪ್ತರು ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ ಸಿಂಗ್ ಅವರನ್ನು ಬಂಧಿಸುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.
ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ ಸಂಸದರೂ ಆದ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಪೊಕ್ಸೊ ಕಾಯ್ದೆಯ ಸೆಕ್ಷನ್ 10ರ ಅಡಿ ಸೇರಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.