ನಾಗ್ಪುರ: ‘ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಲಾಗುವುದು’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಗುರುವಾರ ವಿಧಾನಸಭೆಯಲ್ಲಿ ಹೇಳಿದರು.
‘ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದಾರೆ. ಇನ್ನು ಮುಂದೆ ಎಸ್‌ಐಟಿ ತನಿಖೆಯ ನೇತೃತ್ವ ವಹಿಸಿಕೊಳ್ಳಲಿದೆ’ ಎಂದು ಅವರು ಸದನದಲ್ಲಿ ತಿಳಿಸಿದರು.
ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು, ‘ತನಿಖೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು’ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಫಡಣವೀಸ್, ‘ಯಾರನ್ನೂ ಗುರಿಯಾಗಿಸದೇ ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತದೆ’ ಎಂದರು.
ದಿಶಾ ಅವರು 2020ರ ಜೂನ್ 8ರಂದು ಮುಂಬೈನ ಮಲಾಡ್ ಪ್ರದೇಶದ ಬಹುಮಹಡಿಯ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.