ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 6ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಇದರಲ್ಲಿ 5 ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಸೇರಿದೆ. ಇದುವರೆಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಮಾತ್ರ ಈ ಸಾಧನೆ ಮಾಡಿದ್ದರು.
ಫೆಬ್ರುವರಿ 1 ರಂದು ಮಧ್ಯಂತರ ಬಜೆಟ್ ಮಂಡನೆಯೊಂದಿಗೆ, ಸೀತಾರಾಮನ್ ಅವರು ಸತತ 5 ಬಜೆಟ್‌ಗಳನ್ನು ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ. ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ಹಿಂದಿನ ದಾಖಲೆಗಳನ್ನು ಮುರಿಯಲಿದ್ದಾರೆ.
ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿದ್ದ 1959-1964ರ ನಡುವೆ 5 ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.
ಫೆಬ್ರುವರಿ 1ರಂದು ಸೀತಾರಾಮನ್ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಏಪ್ರಿಲ್ -ಮೇ ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಕೆಲವು ಮೊತ್ತವನ್ನು ಖರ್ಚು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ.
5 ವರ್ಷಗಳ ಪೂರ್ಣಾವಧಿಯ ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ಅನ್ನು ಸಾಮಾನ್ಯವಾಗಿ ಮಧ್ಯಂತರ ಬಜೆಟ್ ಎಂದು ಕರೆಯುತ್ತದೆ. ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಆರಂಭಕ್ಕೆ ಅಥವಾ ಕೊನೆಗೆ ಸಾರ್ವತ್ರಿಕ ಚುನಾವಣೆ ಬಂದರೆ ಆಗ ಮಂಡಿಸುವ ಬಜೆಟ್ ಪೂರ್ಣಕಾಲಿಕ ಬಜೆಟ್ ಆಗಿರುವುದಿಲ್ಲ. ಕೆಲವೇ ತಿಂಗಳ ಅವಧಿಯ ಖರ್ಚು ವೆಚ್ಚಗಳನ್ನು ನಿರ್ವಹಿಸುವ ಮುಂಗಡಪತ್ರವಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.