ADVERTISEMENT

BJP ಶಾಸಕ ವಿಶ್ವರಾಜ್‌ಗೆ ಪ್ರವೇಶ ನಿರಾಕರಣೆ; ಉದಯಪುರ ಅರಮನೆ ಪ್ರದೇಶ ಉದ್ವಿಗ್ನ

ಪಿಟಿಐ
Published 26 ನವೆಂಬರ್ 2024, 3:15 IST
Last Updated 26 ನವೆಂಬರ್ 2024, 3:15 IST
<div class="paragraphs"><p>ಉದಯಪುರ ನಗರ ಅರಮನೆ ಹೊರಗೆ ಬಿಜೆಪಿ ಶಾಸಕ ವಿಶ್ವರಾಜ್‌ ಸಿಂಗ್‌ ಬೆಂಬಲಿಗರು ಮತ್ತು ಪೊಲೀಸರ ನಡುವಿನ ಘರ್ಷಣೆ</p></div>

ಉದಯಪುರ ನಗರ ಅರಮನೆ ಹೊರಗೆ ಬಿಜೆಪಿ ಶಾಸಕ ವಿಶ್ವರಾಜ್‌ ಸಿಂಗ್‌ ಬೆಂಬಲಿಗರು ಮತ್ತು ಪೊಲೀಸರ ನಡುವಿನ ಘರ್ಷಣೆ

   

ಪಿಟಿಐ ಚಿತ್ರ

ಜೈಪುರ: ಮೇವಾರ್‌ ರಾಜಮನೆತನದ ಬಿಜೆಪಿ ಶಾಸಕ ವಿಶ್ವರಾಜ್‌ ಸಿಂಗ್‌ ಮತ್ತು ಅವರ ಬೆಂಬಲಿಗರಿಗೆ ಉದಯಪುರ ನಗರ ಅರಮನೆಗೆ ಪ್ರವೇಶ ನಿರಾಕರಿಸಲಾಗಿದೆ.

ADVERTISEMENT

ಇದರ ಬೆನ್ನಲ್ಲೇ ಅರಮನೆಯ ಹೊರಗೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಅರಮನೆಯ ಒಳಗಿನಿಂದ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.

ಇದೇ ತಿಂಗಳಾರಂಭದಲ್ಲಿ ಶಾಸಕ ವಿಶ್ವರಾಜ್‌ ಅವರ ತಂದೆ ಮಹೇಂದ್ರ ಸಿಂಗ್‌ ಮೇವಾರ್‌ ಅವರು ನಿಧನರಾಗಿದ್ದರು. ಸೋಮವಾರ (ನವೆಂಬರ್‌ 25) ಬೆಳಿಗ್ಗೆ ಚಿತ್ತೋರಗಢ ಕೋಟೆಯಲ್ಲಿ ವಿಶ್ವರಾಜ್ ಅವರಿಗೆ ರಾಜಮನೆತನದ ಪಟ್ಟಾಭಿಷೇಕ ನೆರವೇರಿಸಲಾಯಿತು.

ರಾಜಮನೆತನದ ವಿಧಿವಿಧಾನಗಳ ಭಾಗವಾಗಿ ಉದಯಪುರದ ಏಕಲಿಂಗನಾಥ ದೇವಾಲಯ ಮತ್ತು ನಗರದ ಅರಮನೆಗೆ ಹೊಸದಾಗಿ ಪಟ್ಟ ಅಲಂಕರಿಸಿದ ಮುಖ್ಯಸ್ಥರು ಭೇಟಿ ನೀಡುವುದು ವಾಡಿಕೆ.

ಆದರೆ, ಮಹೇಂದ್ರ ಸಿಂಗ್‌ ಮೇವಾರ್‌ ಅವರ ಕಿರಿಯ ಸಹೋದರ ಅರವಿಂದ್‌ ಸಿಂಗ್‌ ಮೇವಾರ್‌ ಅವರ ನಡುವಿನ ದ್ವೇಷದ ಕಾರಣದಿಂದಾಗಿ ವಿಶ್ವರಾಜ್‌ ಅವರಿಗೆ ಉದಯಪುರ ಅರಮನೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.

ದೇವಾಲಯ ಮತ್ತು ಅರಮನೆ ಎರಡೂ ವಿಶ್ವರಾಜ್‌ ಚಿಕ್ಕಪ್ಪ ಅರವಿಂದ್ ಸಿಂಗ್‌ ಅವರ ನಿಯಂತ್ರಣದಲ್ಲಿದ್ದು, ವಿಶ್ವರಾಜ್‌ ಅವರ ಭೇಟಿ ನಿರಾಕರಿಸಿ ಸಾರ್ವಜನಿಕ ಸೂಚನೆ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಉದಯಪುರ ಅರಮನೆ ಗೇಟ್‌ಗಳ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಚಿತ್ತೋರ್‌ಗಢ ಕೋಟೆಯಲ್ಲಿ ನಡೆದ ಸಮಾರಂಭದ ಬಳಿಕ, ವಿಶ್ವರಾಜ್‌ ಸಿಂಗ್‌ ಮತ್ತು ಅವರ ಬೆಂಬಲಿಗರು ನಗರ ಅರಮನೆ ಮತ್ತು ಏಕಲಿಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಸೋಮವಾರ ಸಂಜೆ ಉದಯಪುರಕ್ಕೆ ತೆರಳಿದ್ದರು. ಈ ವೇಳೆ ಅವರನ್ನು ಪೊಲೀಸರು ತಡೆದಿದ್ದು, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬೆಂಬಲಿಗರು ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.