ಶ್ರೀನಗರ:ಇಲ್ಲಿಂದ 18 ಕಿ.ಮೀ. ದೂರದಲ್ಲಿರುವ ಬಡಗಾಮ್‌ನಲ್ಲಿ ಭಾರತೀಯ ವಾಯುಪಡೆಯ ಎಂಐ–17 ಹೆಲಿಕಾಪ್ಟರ್ ಬುಧವಾರ ಬೆಳಿಗ್ಗೆ ಪತನವಾಗಿದೆ. ಅವಘಡದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರ ವಾಯುನೆಲೆಯಿಂದ ಎಂಐ–17 ಬೆಳಿಗ್ಗೆ10.40ರಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಅದು ಪತನವಾಗಿದೆ ಎಂದು ಮೂಲಗಳು ಹೇಳಿವೆ.
ಆರಂಭದಲ್ಲಿ ಇದು ಮಿಗ್ 21 ಯುದ್ಧವಿಮಾನ ಎಂದು ವಾಯುಪಡೆ ಮೂಲಗಳು ಹೇಳಿದ್ದವು. ಆನಂತರ ಅದು ಎಂಐ–17 ಹೆಲಿಕಾಪ್ಟರ್ ಎಂದು ಸ್ಪಷ್ಟಪಡಿಸಿದವು.
ನೆಲಕ್ಕೆ ಅಪ್ಪಳಿಸಿದ ನಂತರ ಹೆಲಿಕಾಪ್ಟರ್‌ಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಯಿತು. ಪಾಕಿಸ್ತಾನದ ಯುದ್ಧವಿಮಾನಗಳೇ ಇವನ್ನು ಹೊಡೆದುರುಳಿಸಿವೆ ಎಂಬ ವದಂತಿ ಹರಡಿತ್ತು. ಆದರೆ ಇದು ತಾಂತ್ರಿಕ ದೋಷದಿಂದ ಸಂಭವಿಸಿದ ಅವಘಡ ಎಂದು ವಾಯುಪಡೆಯು ಸ್ಪಷ್ಟಪಡಿಸಿತು.
ಈ ಅವಘಡದಲ್ಲಿ ಮೃತಪಟ್ಟವರಲ್ಲಿ ಕೈಫಾಯತ್ ಹುಸೇನ್ (20) ಎಂಬ ಒಬ್ಬ ನಾಗರಿಕ ಸೇರಿದ್ದಾರೆ. ಘಟನೆ ನಡೆದಾಗ ಅವರು ತಮ್ಮ ಹೊಲದಲ್ಲಿ ಕುಳಿತಿದ್ದರು. ಹೆಲಿಕಾಪ್ಟರ್ ಅವರ ಮೇಲೆಯೇ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನಾಲ್ಕು ಮೃತದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಕರಕಲಾಗಿವೆ. ಅವಘಡ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ವಾಯುಪಡೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.