ಗುವಾಹಟಿ: ನಾಗಾಲ್ಯಾಂಡ್‌ನ ವೋಖಾ ಜಿಲ್ಲೆಯಲ್ಲಿ ನಡೆಯುತ್ತಿರುವ ‘ರ‍್ಯಾಟ್–ಹೋಲ್’ ಕಲ್ಲಿದ್ದಲು ಗಣಿಗಾರಿಕೆ (ಕಿರಿದಾದ ಗುಂಡಿಗಳನ್ನು ತೋಡಿ ಮಾಡುವ ಗಣಿಗಾರಿಕೆ) ಘಟಕದಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ನೆರೆಯ ಅಸ್ಸಾಂ ಮೂಲದ ಆರು ಮಂದಿ ಮೃತಪಟ್ಟಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಿಸಿಯಾನ್ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನವೇ ಈ ಘಟನೆ ನಡೆದಿದ್ದು, ಶುಕ್ರವಾರ ಸಂಜೆ ವೇಳೆಗೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿದ್ದಲು ಗಣಿಯಲ್ಲಿ ಭೂಕುಸಿತವಾಗಿ 10 ಕಾರ್ಮಿಕರು ಸಿಲುಕಿಕೊಂಡಿದ್ದರು. ನಾಲ್ವರನ್ನು ರಕ್ಷಿಸಲಾಗಿದ್ದು, ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಮತ್ತೊಂದು ವರದಿ ತಿಳಿಸಿದೆ. ಈ ಘಟನೆ ಕುರಿತು ವೋಖಾ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.
ಬುಡಕಟ್ಟು ಜನರನ್ನೇ ಹೆಚ್ಚಾಗಿ ಹೊಂದಿದ ನಾಗಾಲ್ಯಾಂಡ್‌ನಲ್ಲಿ ಕಲ್ಲಿದ್ದಲು ಗಣಿಗಾರಿಕೆ ಅಕ್ರಮವಲ್ಲ. ಗ್ರಾಮಸ್ಥರು ಮತ್ತು ಸಮುದಾಯದ ಮಾಲೀಕತ್ವದ ಗಣಿ ಭೂಮಿಯ ಮೇಲೆ ಸರ್ಕಾರ ಅಧಿಕಾರ ಚಲಾಯಿಸಲಾಗದು. ಆದರೆ, ಗಣಿಗಾರಿಕೆ ನಡೆಸುವವರು ಸುರಕ್ಷಿತ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಂಗದ ಒಳಗೆ ಕಾರ್ಮಿಕರು ಗುದ್ದಲಿ ಮತ್ತು ಇತರೆ ಸಲಕರಣೆಗಳನ್ನು ಬಳಸಿಕೊಂಡು ಭೂಮಿಯನ್ನು ಕೊರೆಯುವುದಕ್ಕೆ ‘ರ‍್ಯಾಟ್–ಹೋಲ್’ ಗಣಿಗಾರಿಕೆ ಎಂದು ಕರೆಯಲಾಗುತ್ತದೆ. 2014ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ‘ರ‍್ಯಾಟ್–ಹೋಲ್’ ಗಣಿಗಾರಿಕೆಯನ್ನು ನಿಷೇಧಿಸುವ ಮುನ್ನ ಮೇಘಾಲಯದಲ್ಲೂ ಹಲವು ದುರಂತಗಳು ಸಂಘವಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.