ADVERTISEMENT

ಜಮ್ಮು: ಒಂದೇ ಕುಟುಂಬದ 6 ಮಂದಿ ಅನುಮಾನಾಸ್ಪದ ಸಾವು, ಪೊಲೀಸರಿಂದ ತನಿಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2022, 6:23 IST
Last Updated 17 ಆಗಸ್ಟ್ 2022, 6:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮುವಿನಲ್ಲಿ ಒಂದೇ ಕುಟುಂಬದ ಆರು ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸಕೀನಾ ಬೇಗಂ, ಅವರ ಇಬ್ಬರು ಪುತ್ರಿಯರಾದ ನಸೀಮಾ ಅಖ್ತರ್ ಮತ್ತು ರುಬಿನಾ ಬಾನೋ, ಪುತ್ರ ಜಾಫರ್ ಸಲೀಂ ಮತ್ತು ಇಬ್ಬರು ಸಂಬಂಧಿಕರಾದ ನೂರ್ ಉಲ್ ಹಬೀಬ್ ಮತ್ತು ಸಜಾದ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಮ್ಮುವಿನ ಸಿದ್ರಾ ಪ್ರದೇಶದಲ್ಲಿರುವ ಮನೆಯಲ್ಲಿ ಶವಗಳು ಪತ್ತೆಯಾಗಿವೆ.

ADVERTISEMENT

‘ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಪೊಲೀಸ್‌ ಠಾಣೆಗೆ ದೂರವಾಣಿ ಕರೆ ಮಾಡಿದ್ದರು. ಸಿದ್ರಾದಲ್ಲಿರುವ ತನ್ನ ಸಹೋದರ ನೂರ್ ಉಲ್ ಹಬೀಬ್ ಮೊಬೈಲ್‌ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಆಕೆ ಆತಂಕ ವ್ಯಕ್ತಪಡಿಸಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ನೋಡಿದಾಗ ಆರು ಮಂದಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ಹೇಳಿದ್ದಾರೆ.

ಮೃತರು ವಿಷ ಸೇವಿಸಿ ಆತ್ಮಹತ್ಯೆ‌ ಮಾಡಿಕೊಂಡಿರಬಹುದು ಎಂದು ಮೇಲ್ನೊಟಕ್ಕೆ ತಿಳಿದುಬಂದಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲಾಗಿದೆ’ ಎಂದು ಚಂದನ್ ಕೊಹ್ಲಿ ಹೇಳಿದ್ದಾರೆ.

ಮೃತದೇಹಗಳನ್ನು ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ಭೇಟಿ ನೀಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.