ADVERTISEMENT

ಗುಲಾಂ ನಬಿ ಆಜಾದ್ ಬೆಂಬಲಿಸಿ ಮತ್ತಷ್ಟು ನಾಯಕರು ಕಾಂಗ್ರೆಸ್‌ಗೆ ವಿದಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2022, 10:56 IST
Last Updated 26 ಆಗಸ್ಟ್ 2022, 10:56 IST
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್   

ನವದೆಹಲಿ:ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ, ನಬಿ ಅವರನ್ನು ಬೆಂಬಲಿಸಿ ಜಮ್ಮು ಮತ್ತು ಕಾಶ್ಮೀರದ ಕನಿಷ್ಠ ಆರು ಸದಸ್ಯರು ಪಕ್ಷ ತೊರೆದಿದ್ದಾರೆ.

ಜಿ.ಎಂ. ಸರೂರಿ, ಹಾಜಿ ಅಬ್ದುಲ್‌ ರಶೀದ್‌, ಮೊಹಮ್ಮದ್ ಅಮಿನ್ ಭಟ್, ಗುಲ್ಜರ್‌ ಅಹ್ಮದ್ ವಾನಿ ಮತ್ತು ಚೌಧರಿ ಮೊಹಮ್ಮದ್ ಅಕ್ರಮ್‌ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ತೊರೆದಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್‌.ಎಸ್‌. ಚಿಬು ಅವರೂ ರಾಜೀನಾಮೆ ನೀಡಿದ್ದಾರೆ.

ADVERTISEMENT

ಸಮಾಜವಾದಿ ಪಕ್ಷದಿಂದ (ಎಸ್‌ಪಿ)ರಾಜ್ಯಸಭೆ ಪ್ರವೇಶಿಸಿರುವಕಪಿಲ್‌ ಸಿಬಲ್‌ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್‌ ಅವರು ಇತ್ತೀಚೆಗೆ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದರು. ಇದೀಗ ಆಜಾದ್ ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ಹಿನ್ನಡೆ ಉಂಟುಮಾಡಿದೆ.

ಆಜಾದ್ ಅವರು ಪಕ್ಷ ತೊರೆಯುತ್ತಿರುವುದಕ್ಕೆ ಕಾರಣಗಳನ್ನು ನೀಡಿ ಐದು ಪುಟಗಳ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ.

ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಕಳೆದ ಎಂಟು ವರ್ಷಗಳಲ್ಲಿ ಕಾಂಗ್ರೆಸ್‌ ನಾಯಕತ್ವದ ಚುಕ್ಕಾಣಿಯನ್ನು ಗಂಭೀರವಲ್ಲದ ವ್ಯಕ್ತಿಯೊಬ್ಬರ ಕೈಗೆ ನೀಡುವ ಪ್ರಯತ್ನಗಳು ನಡೆದವು. ಪಕ್ಷಕ್ಕಾಗಿಜೀವನವನ್ನೇ ಮುಡಿಪಾಗಿಟ್ಟ ಪ್ರಮುಖ ನಾಯಕರನ್ನು ಕಡೆಗಣಿಸಲಾಯಿತು. ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಇವೆಲ್ಲವೂ ಕಾರಣ’ ಎಂದು ಆರೋಪಿಸಿದ್ದಾರೆ.

ಇತರ ನಾಯಕರುಆಜಾದ್ ನಡೆಗೆ ಅಚ್ಚರಿ ವ್ಯಕ್ತಪಡಿಸಿ, ಟೀಕಾಪ್ರಹಾರ ನಡೆಸಿದ್ದಾರೆ.

ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜೈರಾಮ್‌ ರಮೇಶ್‌ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು,ಆಜಾದ್‌ ಅವರ ಡಿಎನ್‌ಎ ‘ಮೋದಿ’ಫೈಡ್‌ (modi-fied–ಬದಲಾವಣೆ) ಆಗಿದೆ ಎಂದು ಕುಟುಕಿದ್ದಾರೆ.

'ರಾಜ್ಯಸಭೆಯ ಅಧಿಕಾರಾವಧಿ ಮುಗಿದ ತಕ್ಷಣ, ನೀವು ವಿಚಲಿತರಾಗಿದ್ದೀರಿ. ಅಧಿಕಾರವಿಲ್ಲದೇ ನೀವು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ' ಎಂದು ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.