ADVERTISEMENT

ಗುಜರಾತ್‌: ಮಾಲಿನ್ಯ ಬಾಧಿತ 6 ಗ್ರಾಮಗಳಿಗೆ ₹25 ಲಕ್ಷ ಪರಿಹಾರ

ಎನ್‌ಜಿಟಿ ಆದೇಶ ಪಾಲನೆ: ಎಚ್‌ಬಿಇಪಿಎಲ್‌ಗೆ ‘ಸುಪ್ರೀಂ’ ನಿರ್ದೇಶನ

ಪಿಟಿಐ
Published 15 ಮೇ 2024, 16:02 IST
Last Updated 15 ಮೇ 2024, 16:02 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ಸುಪ್ರೀಂ ಕೋರ್ಟ್‌

ಅಹಮದಾಬಾದ್‌: ಘನತ್ಯಾಜ್ಯ ವಿಲೇವಾರಿಯಿಂದ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ರಾಜಕೋಟ್‌ ಜಿಲ್ಲೆಯ ಆರು ಗ್ರಾಮಗಳು ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಒಟ್ಟು ₹ 25 ಲಕ್ಷ ಪರಿಹಾರ ಪಡೆಯಲಿವೆ ಎಂದು ‘ಪರ್ಯಾವರಣ ಮಿತ್ರ’ ಎಂಬ ಎನ್‌ಜಿಒ ಬುಧವಾರ ತಿಳಿಸಿದೆ.

ADVERTISEMENT

‘2013ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶಿಸಿರುವಂತೆ, ಈ ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಠೇವಣಿ ಇಡುವಂತೆ ಹೆಂಜರ್ ಬಯೊಟೆಕ್ ಎನರ್ಜೀಸ್ ಪ್ರೈವೇಟ್ ಲಿಮಿಟೆಡ್‌ (ಎಚ್‌ಬಿಇಪಿಎಲ್‌) ಎಂಬ ಕಂಪನಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ’ ಎಂದು ಎನ್‌ಜಿಒ ತಿಳಿಸಿದೆ. 

‘ಈ ಪರಿಹಾರ ಮೊತ್ತವನ್ನು ಬಾಧಿತ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಹಂಚಿಕೆ ಮಾಡಬೇಕು ಎಂದೂ ಸುಪ್ರೀಂ ಕೋರ್ಟ್‌ ಸೂಚಿಸಿದ್ದು, ಈ ಹಣ ಬಿಡುಗಡೆಯಾಗುವ ಬಗ್ಗೆಯೂ ಗಮನ ನೀಡಲಾಗುವುದು’ ಎಂದು ತಿಳಿಸಿದೆ.

ನಾಕ್ರವಾಡಿ, ಪಿಯಾಲಿಯಾ, ನಾಗಲ್ಪಾರ, ಹದ್ಮತಿಯಾ, ಖಿಜಾದಿಯಾ ಹಾಗೂ ರಾಜಗಢ ಗ್ರಾಮಗಳು ಪರಿಹಾರ ಪಡೆಯಲಿವೆ. ಈ ಗ್ರಾಮಗಳಲ್ಲಿ ಅಂದಾಜು 7,500 ಜನರು ವಾಸಿಸುತ್ತಿದ್ದಾರೆ.

ಎಚ್‌ಬಿಇಪಿಎಲ್‌ ಕಂಪನಿಯು ರಾಜಕೋಟ್‌ ನಗರದ ಘನತ್ಯಾಜ್ಯ ವಿಲೇವಾರಿಗಾಗಿ ಸಮೀಪದ ನಾಕ್ರವಾಡಿ ಗ್ರಾಮದಲ್ಲಿ ಭೂಭರ್ತಿ ಸೌಲಭ್ಯ ಸ್ಥಾಪಿಸಿದೆ. ಘನತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡದೇ ಇರುವುದು ಹಾಗೂ ಸಂಸ್ಕರಣೆ ಮಾಡದ ತ್ಯಾಜ್ಯವನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಕಿದ್ದರಿಂದ ಈ ಆರು ಗ್ರಾಮಗಳ ಜನರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿತ್ತು. 

ಅಂತರ್ಜಲ ಕಲುಷಿತವಾಗುವುದು ಹಾಗೂ ಕೃಷಿ ಜಮೀನುಗಳು ಫಲವತ್ತತೆ ಕಳೆದುಕೊಂಡಿದ್ದವು ಎಂದು ಎನ್‌ಜಿಒ ನಿರ್ದೇಶಕ ಮಹೇಶ ಪಾಂಡ್ಯ ಹೇಳಿದ್ದಾರೆ.

₹ 25 ಲಕ್ಷ ಪರಿಹಾರ ನೀಡುವಂತೆ ಎನ್‌ಜಿಟಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಎಚ್‌ಬಿಇಪಿಎಲ್‌, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಎನ್‌ಜಿಟಿ ಆದೇಶಿಸಿರುವಂತೆ ಪರಿಹಾರ ಮೊತ್ತ ನೀಡುವಂತೆ ನಿರ್ದೇಶಿಸಿ ಮೇ 7ರಂದು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.