ADVERTISEMENT

ಹಾಥರಸ್‌ ಕಾಲ್ತುಳಿತ ಪ್ರಕರಣ: 6 ‘ಸೇವಾದಾರ’ರ ಬಂಧನ

ಪಿಟಿಐ
Published 4 ಜುಲೈ 2024, 10:56 IST
Last Updated 4 ಜುಲೈ 2024, 10:56 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಹಾಥರಸ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ಸಂಭವಿಸಿದ್ದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ‘ಸೇವಾದಾರ’ರನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಐಜಿಪಿ (ಅಲಿಗಢ ವಲಯ) ಶಲಭ ಮಾಥೂರ್‌, ತಲೆಮರೆಸಿಕೊಂಡಿರುವ ಮುಖ್ಯ ‘ಸೇವಾದಾರ’ ಹಾಗೂ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ ಮಧುಕರ್ ಕುರಿತು ಸುಳಿವು ನೀಡಿದವರಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದರು.

ADVERTISEMENT

‘ಮಧುಕರ್‌ ವಿರುದ್ಧ ಶೀಘ್ರವೇ ಜಾಮೀನು ರಹಿತ ವಾರಂಟ್‌ ಸಹ ಹೊರಡಿಸಲಾಗುವುದು. ಅಗತ್ಯ ಕಂಡುಬಂದಲ್ಲಿ ನಾರಾಯಣ ಸಾಕಾರ ವಿಶ್ವಹರಿ ಬಾಬಾ (ಭೋಲೆ ಬಾಬಾ) ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಹೇಳಿದರು. 

ರಾಮ್‌ ಲಡೈತೆ(50), ಉಪೇಂದ್ರ ಸಿಂಗ್ ಯಾದವ್(62), ಮೇಘ್ ಸಿಂಗ್(61), ಮುಕೇಶ್‌ ಕುಮಾರ್(38) ಮಹಿಳೆಯರಾದ ಮಂಜು ಯಾದವ್‌(30) ಹಾಗೂ ಮಂಜು ದೇವಿ(40) ಬಂಧಿತರು.  

ಹಾಥರಸ್ ಘಟನೆ ಸರ್ಕಾರದ ವೈಫಲ್ಯ ತೋರಿಸುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಕಷ್ಟು ಆಂಬುಲೆನ್ಸ್‌ಗಳು ಇರಲಿಲ್ಲ. ಅವರಿಗೆ ಚಿಕಿತ್ಸೆ ನೀಡಲು ಅಗತ್ಯ ಸಂಖ್ಯೆಯಷ್ಟು ವೈದ್ಯರೂ ಇರಲಿಲ್ಲ.
ಅಜಯ್‌ ರಾಯ್, ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ

ರಾಮ್‌ ಲಡೈತೆ ಮೈನ್‌ಪುರಿ ಜಿಲ್ಲೆಯವರಾದರೆ, ಉಪೇಂದ್ರ ಸಿಂಗ್‌ ಯಾದವ್ ಮೈನ್‌ಪುರಿಯವರು. ಉಳಿದ ಆರೋಪಿಗಳು ಹಾಥರಸ್‌ನವರು.

‘ತಾವು ಸತ್ಸಂಗ ಸಂಘಟನಾ ಸಮಿತಿ ಸದಸ್ಯರಾಗಿದ್ದು, ಕಾರ್ಯಕ್ರಮದ ವೇಳೆ ಸೇವಾದಾರರಾಗಿ (ಸ್ವಯಂ ಸೇವಕರು) ಕಾರ್ಯ ನಿರ್ವಹಿಸುತ್ತಿದ್ದೆವು ಎಂಬುದಾಗಿ ಬಂಧಿತರು ವಿಚಾರಣೆ ವೇಳೆ ತಿಳಿಸಿದ್ದಾರೆ. ಸಂಘಟಕರು ಹಾಗೂ ಸದಸ್ಯರು ಜನರನ್ನು ಸೇರಿಸಿ, ಅವರಿಂದ ದೇಣಿಗೆ ಸಂಗ್ರಹಿಸಿದ್ದಾರೆ. ಇದಕ್ಕೆ ಸತ್ಸಂಗ ಸಮಿತಿ ನೆರವು ನೀಡಿದೆ’ ಎಂದೂ ಮಾಥೂರ್‌ ತಿಳಿಸಿದರು.

‘ಇತರ ಆರೋಪಿಗಳನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಅವರನ್ನು ಪತ್ತೆ ಮಾಡಿ, ಬಂಧಿಸುವುದಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಮಾಥೂರ್‌ ಹೇಳಿದರು.

‘ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಹೆಸರು ಉಲ್ಲೇಖಿಸಿಲ್ಲ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ತನಿಖೆ ಸಂದರ್ಭದಲ್ಲಿ ಅವರ ಹೆಸರು ಪ್ರಸ್ತಾಪಗೊಂಡರೆ, ಪೊಲೀಸರು ಅವರನ್ನು ಕೂಡ ವಿಚಾರಣೆಗೆ ಒಳಪಡಿಸುವರು’ ಎಂದು ಪ್ರತಿಕ್ರಿಯಿಸಿದರು.

‘ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತನಿಖೆ ಸಂದರ್ಭದಲ್ಲಿ ಯಾರ ಹೆಸರುಗಳು ಪ್ರಸ್ತಾಪವಾಗುವವೋ ಅವರನ್ನೆಲ್ಲಾ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಹಾಥರಸ್‌ ದುರ್ಘಟನೆ ಹಿಂದೆ ಯಾವ ಪಿತೂರಿಯೂ ಇಲ್ಲ. ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

ಬಾಬಾ ಅವಿತುಕೊಂಡಿಲ್ಲ: ವಕೀಲರ ಹೇಳಿಕೆ

ಮೈನ್‌ಪುರಿ: ‘ಭೋಲೆ ಬಾಬಾ ಎಲ್ಲಿಯೂ ಅವಿತುಕೊಂಡಿಲ್ಲ’ ಎಂದು ಅವರ ಪರ ವಕೀಲ ಎ.ಪಿ.ಸಿಂಗ್‌ ಗುರುವಾರ ಹೇಳಿದ್ದಾರೆ. ಎಎ‍ಫ್‌ಪಿ ಜೊತೆ ಮಾತನಾಡಿದ ಅವರು ಭೋಲೆ ಬಾಬಾ ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಅವರು ಉತ್ತರ ಪ್ರದೇಶದಲ್ಲಿಯೇ ಇದ್ದಾರೆ ಎಂದಷ್ಟೆ ಪ್ರತಿಕ್ರಿಯಿಸಿದ್ದಾರೆ.

‘ಮಂಗಳವಾರ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿ ನನ್ನ ಕಕ್ಷಿದಾರನನ್ನು ದೂರುವುದು ಸರಿಯಲ್ಲ. ಅವರು ತಪ್ಪಿಸಿಕೊಂಡು ಹೋಗಿಲ್ಲ. ಅವಿತಿಟ್ಟುಕೊಳ್ಳುವುದಕ್ಕೆ ಯಾವ ಕಾರಣವೂ ಇಲ್ಲ’ ಎಂದ ಅವರು ‘ಅವರಿಗೆ ಕಾನೂನಿನಲ್ಲಿ ನಂಬಿಕೆ ಇದ್ದು ಪೊಲೀಸರ ಸೂಚನೆಗಳನ್ನು ಪಾಲಿಸುತ್ತಿದ್ದಾರೆ’ ಎಂದರು.

‘ಅಂದು ಜನರ ಗುಂಪಿನಲ್ಲಿದ್ದ ಸಮಾಜ ವಿರೋಧಿ ಶಕ್ತಿಗಳು ಕಾಲ್ತುಳಿತ ಉಂಟಾಗಲು ಕಾರಣ’ ಎಂದು ಹೇಳಿದ ವಕೀಲ ಸಿಂಗ್‌ ‘ಈ ದುರ್ಘಟನೆ ಕುರಿತು ನಡೆಯುತ್ತಿರುವ ತನಿಖೆಯನ್ನು ಭೋಲೆ ಬಾಬಾ ಎದುರಿಸುವರು’ ಎಂದರು.

‘ಭೋಲೆ ಬಾಬಾ’ ಆಶ್ರಮಕ್ಕೆ ಭಾರಿ ಭದ್ರತೆ

‘ಭೋಲೆ ಬಾಬಾ’ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತ ಘಟನೆ ಬೆನ್ನಲ್ಲೇ ಮೈನ್‌ಪುರಿಯಲ್ಲಿರುವ ಅವರ ಆಶ್ರಮಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಇಲ್ಲಿನ ‘ಜಗತ್‌ ಗುರು ಸಾಕಾರ ವಿಶ್ವಹರಿ ಭೋಲೆ ಬಾಬಾ’ ಆಶ್ರಮವನ್ನು ಪ್ರವೇಶಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

‘ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ತಂಡದ(ಎಸ್‌ಒಜಿ) ಸಿಬ್ಬಂದಿಯನ್ನು ಒಳಗೊಂಡ ತಂಡ ಬುಧವಾರ ರಾತ್ರಿ ಆಶ್ರಮ ಪ್ರವೇಶಿಸಿ ಪರಿಶೀಲನೆ ನಡೆಸಿದೆ’ ಎಂದು ಪೊಲೀಸ್‌ ಅಧಿಕಾರಿ ಸುನೀಲ್‌ಕುಮಾರ್‌ ಸಿಂಗ್ ತಿಳಿಸಿದ್ದಾರೆ.

‘ಪೊಲೀಸರು ತೆರಳಿದ್ದ ವೇಳೆ ಆಶ್ರಮದಲ್ಲಿ ಮಹಿಳೆಯರು ಸೇರಿದಂತೆ 50–60 ಸ್ವಯಂ ಸೇವಕರಿದ್ದರು. ಭೋಲೆ ಬಾಬಾ ನಿನ್ನೆಯೂ ಇರಲಿಲ್ಲ ಇಂದು ಕೂಡ ಇದ್ದಿಲ್ಲ’ ಎಂದು ಹೇಳಿದ್ದಾರೆ.

‘ತನಿಖೆ ಭಾಗವಾಗಿ ನಾವು ಆಶ್ರಮಕ್ಕೆ ಬಂದಿಲ್ಲ. ಇಲ್ಲಿ ಒದಗಿಸಿರುವ ಭದ್ರತೆ ಪರಿಶೀಲಿಸುವುದಕ್ಕಾಗಿ ಬಂದಿದ್ದೇವೆ’ ಎಂದು ಮೈನ್‌ಪುರಿಯ ಹೆಚ್ಚುವರಿ ಎಸ್ಪಿ ರಾಹುಲ್‌ ಮಿಠಾಸ್‌ ಹೇಳಿದ್ದಾರೆ.

ಪ್ರಮುಖ ಅಂಶಗಳು

  • ಕಾಲ್ತುಳಿತದಲ್ಲಿ ಮೃತಪಟ್ಟಿರುವ 121 ಜನರ ಗುರುತು ಪತ್ತೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ

  • ಮೃತರಲ್ಲಿ 112 ಮಹಿಳೆಯರು 7 ಮಕ್ಕಳು ಸೇರಿದ್ದಾರೆ

  • ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್‌ ಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ. ನಿವೃತ್ತ ಐಎಎಸ್‌ ಅಧಿಕಾರಿ ಹೇಮಂತರಾವ್ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಭವೇಶಮುಕರ್ ಸಿಂಗ್‌ ಸಮಿತಿ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.