ರೇವಾ: ಆರು ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗಡಿ ಸಮೀಪದ ಮಾಣಿಕಾ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕೊಳವೆ ಬಾವಿ ಬಳಿ ಬಾಲಕ ಆಟವಾಡುತ್ತಿದ್ದಾಗ ಘಟನೆ ಸಂಭವಿಸಿದೆ.
ಸುಮಾರು 40 ಅಡಿ ಆಳದಲ್ಲಿ ಸಿಲುಕಿರುವ ಬಾಲಕನನ್ನು ರಕ್ಷಿಸಲು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ (ಎಸ್‌ಡಿಇಆರ್‌ಎಫ್) ಸ್ಥಳಕ್ಕೆ ಧಾವಿಸಿದೆ ಎಂದು ರೇವಾ ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ತಿಳಿಸಿದ್ದಾರೆ.
ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದೆ. ಬಾಲಕನ ಸ್ಥಿತಿ ವೀಕ್ಷಣೆಗಾಗಿ ಕ್ಯಾಮೆರಾ ಇಳಿಸಲಾಗಿದೆ. ಆದರೆ ಅಡಚಣೆ ಎದುರಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ತಿಳಿಸಿದ್ದಾರೆ.
ಕೊಳವೆ ಬಾವಿ ಸುಮಾರು 70 ಅಡಿ ಆಳವಿದ್ದು, ಮಗುವನ್ನು ರಕ್ಷಿಸಲು ಕೊಳವೆ ಬಾವಿಗೆ ಸಮಾನಾಂತರವಾಗಿ ಹೊಂಡ ಕೊರೆಯಲಾಗುತ್ತಿದೆ. ಅಕಾಲಿಕ ಮಳಿಯಿಂದಾಗಿ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಕ್ಷಣೆ ಕಾರ್ಯಾಚರಣೆಗಾಗಿ ವಾರಾಣಸಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್‌ಡಿಆರ್‌ಎಫ್) ಕರೆಯಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಸ್ಥಳಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.